ಕರಿಕೆ, ಜೂ. ೧೫: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ವ್ಯಾಪಕ ಸಮಸ್ಯೆ ತಲೆದೋರಿದ್ದು, ಗಡಿ ಭಾಗವಾದ ಕರಿಕೆ ಗ್ರಾಮದಲ್ಲಿ ಕೆಲ ತಿಂಗಳಿನಿAದ ಸಮಸ್ಯೆ ತೀವ್ರವಾಗಿದೆ. ಇತ್ತ ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕಳೆದ ಮೂರು ವರ್ಷಗಳ ಹಿಂದೆ ಅರವತ್ತೆöÊದು ಲಕ್ಷ ವೆಚ್ಚದಲ್ಲಿ ನೈಸರ್ಗಿಕ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲು ಭಾಗಮಂಡಲ ಮೂಲದ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.

ಕೋವಿಡ್ ಕಾರಣದಿಂದ ಕಾಮಗಾರಿ ವಿಳಂಬವಾಗಿ ಇದೀಗ ಕಾಮಗಾರಿ ಪೂರ್ಣಗೊಳಿಸಿದ್ದು ಸಂಪೂರ್ಣ ಕಳಪೆ ಕಾಮಗಾರಿಯಾಗಿರುತ್ತದೆ. ಬಾಚಿಮಲೆ ಅರಣ್ಯದಂಚಿನ ನದಿಯಿಂದ ಪೈಪ್ ಅಳವಡಿಸಿ ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲಿ ಚರಂಡಿ ಮಾಡಿ ಸುಮಾರು ಎಂಟತ್ತು ಕಿ.ಮೀ. ಪೈಪ್‌ಲೈನ್ ಅಳವಡಿಸಲಾಗಿದೆ. ಕಾಮಗಾರಿ ಅವೈಜ್ಞಾನಿಕವಾದ ಪರಿಣಾಮ ಪೈಪ್ ಹಾನಿಯಾಗಿ ನೀರು ಗ್ರಾಮಕ್ಕೆ ತಲುಪಿಲ್ಲ. ಬದಲಿಗೆ ಪೈಪಿನಿಂದ ದೊಡ್ಡ ಕಾರಂಜಿ ರೀತಿಯಲ್ಲಿ ನೀರು ಚಿಮ್ಮಿ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಮನರಂಜನೆ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಇಂಜಿನಿಯರ್ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ ಗುತ್ತಿದಾರನಿಗೆ ಅರ್ಧದಷ್ಟು ಹಣ ಪಾವತಿಯಾಗಿದ್ದು, ಇದುವರೆಗೆ ಗ್ರಾಮಸ್ಥರು ಒಂದು ಹನಿ ನೀರು ಉಪಯೋಗಿಸಿಲ್ಲ, ಪಂಚಾಯಿತಿಗೆ ಕಾಮಗಾರಿ ವಹಿಸಿರುವುದಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಈ ಕಾಮಗಾರಿಯ ಬಿಲ್ ತಡೆ ಹಿಡಿದು, ಪಾವತಿಯಾದ ಹಣ ಮರುಪಾವತಿಗೆ ಕ್ರಮ ವಹಿಸಿ, ಅವ್ಯವಹಾರವನ್ನು ತನಿಖೆಗೆ ಆದೇಶಿಸಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವನ್ನು ತಡೆಗಟ್ಟಲು ಕ್ರಮ ವಹಿಸಬೇಕಿದೆ. - ಸುಧೀರ್ ಹೊದ್ದೆಟ್ಟಿ