ಕಣಿವೆ, ಜೂ. ೧೩: ಬಡವರ ಬಾದಾಮಿ, ಬಯಲು ಸೀಮೆಯ ಖರ್ಜೂರ ಎಂದೇ ವಾಡಿಕೆ ಯಲ್ಲಿರುವ ಈಚಲ ಮರ ತನ್ನಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಬಿಟ್ಟ ವರ್ಷ ಮಳೆ ವಿಳಂಬವಾಗುತ್ತದೆ.
ಇದು ಗ್ರಾಮೀಣ ರೈತರ ಅಂಬೋಣ. ಏಕೆಂದರೆ ಈ ವರ್ಷ ಮಳೆ ಸಕಾಲಿಕವಾಗಿ ಆಗುತ್ತಿಲ್ಲ. ಕಳೆದ ಜನವರಿಯಿಂದ ಏಪ್ರಿಲ್ ತಿಂಗಳ ಅಂತ್ಯದವರೆಗೂ ಮಳೆ ಬಾರಲೇ ಇಲ್ಲ. ಈಗಲೂ ಮೋಡಗಳು ತೇಲುತ್ತಿವೆ ಹೊರತು ಮಳೆ ಮಾತ್ರ ಬರುತ್ತಿಲ್ಲ. ಇದು ರೈತರಿಗೆ ಭಾರೀ ನಿರಾಸೆ ಮೂಡಿಸುತ್ತಿದೆ. ಹಾಗಾಗಿ ಮಳೆ ಬಾರದಿದ್ದಕ್ಕೂ ಈಗ ಈ ಈಚಲ ಮರಗಳು ಹಣ್ಣು ಬಿಟ್ಟಿರುವುದಕ್ಕೂ ರೈತರು ಯಾವುದೆಲ್ಲಾ ಕಲ್ಪನೆಗಳನ್ನು ಕಟ್ಟುತ್ತಾ ವರುಣ ದೇವನಿಗೆ ಮೊರೆ ಇಡುತ್ತಿದ್ದಾರೆ.
ಖಜಾನೆಯ ಮೂಲವಾಗಿದ್ದ ಈಚಲ ಮರ
ಒಂದು ಕಾಲದಲ್ಲಿ ಈ ಈಚಲ ಮರದಲ್ಲಿ ಅವ್ಯಾಹತವಾಗಿ ತೆಗೆಯುತ್ತಿದ್ದ ‘ಸೇಂದಿ' ಎಂಬ "ಪಾನೀಯ" ರಾಜ್ಯ ಸರ್ಕಾರದ ಬೊಕ್ಕಸದ ಮೂಲ ಆದಾಯವಾಗಿತ್ತು.
ಈಚಲ ಮರದ ಸೇಂದಿ ವಹಿವಾಟು ಇದ್ದ ಅವಧಿಯಲ್ಲಿ ನಾಡಿನ ಮಂದಿ ಸುಭಿಕ್ಷವಾಗಿದ್ದರು. ಅಂದರೆ ಈಚಲ ಮರದಿಂದ ತೆಗೆಯುತ್ತಿದ್ದ ಸೇಂದಿಯೂ ಕೂಡ ಆರೋಗ್ಯವಾದ ಪಾನೀಯವಾಗಿತ್ತು.
ಅಂದು ಕೂಲಿಯೂ ಕಡಿಮೆ ಇತ್ತು. ಕೂಲಿಗೆ ತಕ್ಕನಾಗಿ ಅತ್ಯಲ್ಪ ಕಡಿಮೆ ಹಣದಲ್ಲಿ ಸೇಂದಿಯೂ ಸಿಗುತ್ತಿತ್ತು.
ಆದರೆ ಇಂದು ಕೂಲಿ ಕಾರ್ಮಿಕರ ವೇತನ ಕನಿಷ್ಟ ಎಂದರೂ ೩೦೦ ರಿಂದ ೬೦೦ ರೂ ಇದೆ. ಈ ಪೈಕಿ ಮದ್ಯದ ಚಟಕ್ಕೆ ಬಿದ್ದವರು ತಮ್ಮ ಕೂಲಿಯ ಹಣದ ಅರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಕುಡಿತಕ್ಕೆ ವ್ಯಯ ಮಾಡುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ.
ವಿನಾಶದತ್ತ ಈಚಲ ಮರ
ಇದೀಗ ಈಚಲ ಮರಗಳು ವಿನಾಶದತ್ತ ಸಾಗಿವೆ. ತೆಂಗಿನ ಮರದೋಪಾದಿಯಲ್ಲಿ ಎತ್ತರಕ್ಕೆ ಬೆಳೆಯುವ ಈಚಲ ಮರ ತನ್ನ ಮೈತುಂಬೆಲ್ಲಾ ಮುಳ್ಳು ಮುಳ್ಳು ಗರಿಗಳನ್ನು ಹೊಂದಿರುತ್ತದೆ.
ಪ್ರತಿ ಬೇಸಿಗೆಯಲ್ಲಿ ಕಾಯಿ ಬಿಡುವ ಈ ಈಚಲ ಮರ ಮುಂಗಾರಿನ ಹೊತ್ತಿಗೆ ಹಣ್ಣಾಗಿಸುತ್ತದೆ. ಇದರ ಹಣ್ಣನ್ನು ಪಕ್ಷಿಗಳು ಸವಿಯುತ್ತವೆ. ಕುರಿ ಹಾಗೂ ಮೇಕೆಗಳಿಗೂ ಪಂಚ ಪ್ರಾಣ. ಹಳ್ಳಿಗಾಡಿನ ಹೈಕಲು ಕಲ್ಲು ಹೊಡೆದು ಇದರ ಹಣ್ಣು ಬೀಳಿಸಿ ಮೆಲ್ಲುತ್ತಾರೆ.
ಇದರ ಹಣ್ಣಿನಲ್ಲಿ ಕ್ಯಾಲ್ಸಿಯಂ, ಖನಿಜಾಂಶ ಹಾಗೂ ಪ್ರೋಟಿನ್ ಅಂಶ ಹೆಚ್ಚಾಗಿದ್ದು ಹಲ್ಲುಗಳ ಸಮಸ್ಯೆಗೆ, ಮೂಳೆಗಳಿಗೆ, ಮಲಬದ್ಧತೆಗೆ, ನಾಡಿ ಮಿಡಿತದ ಸಮಸ್ಯೆಗೆ ಪರಿಹಾರ. ಹೊಟ್ಟೆ ಹಾಗೂ ಮೆದುಳಿಗೂ ರಾಮಬಾಣ.
- ಕೆ.ಎಸ್. ಮೂರ್ತಿ