ಗೋಣಿಕೊಪ್ಪಲು, ಜೂ. ೧೪: ಎಲ್ಲಾ ಬಾಂಧವರು ಸಾಮರಸ್ಯ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು. ಅಂತಹ ವಾತಾವರಣ ಜಿಲ್ಲೆಯಲ್ಲಿ ಸದಾ ಇರಬೇಕು. ಸಾಮರಸ್ಯದ ರಕ್ಷಣೆಗಾಗಿ ತಾನು ಎಲ್ಲಾ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಗೋಣಿಕೊಪ್ಪಲುವಿನ ಪ್ರಣವ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಯುನೈಟೆಡ್ ಜಮಾಅತ್‌ನ ಹಿರಿಯರು ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿಯಾದ ಅಬ್ದುಲ್ ರೆಹಮಾನ್ (ಬಾಪು) ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಕೊಡಗಿನಲ್ಲಿ ಉತ್ತಮ ರೀತಿಯ ಸೌಹಾರ್ದತೆ ಮೂಡಿ ಬರಬೇಕು. ಶಾಂತಿ ಸುವ್ಯವಸ್ಥೆಗೆ ಕೊಡಗು ಮಾದರಿ ಜಿಲ್ಲೆಯಾಗಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ದುರಾಡಳಿತಕ್ಕೆ ಅವಕಾಶ ಮಾಡಿಕೊಡದ ರೀತಿಯಲ್ಲಿ ಕ್ಷೇತ್ರದ ಜನತೆಯ ಸೇವೆಯನ್ನು ಮಾಡೋಣ ಮುಂದಿನ ೫ ವರ್ಷ ನನ್ನ ಮೇಲೆ ದೊಡ್ಡ ಜವಬ್ದಾರಿ ಇದೆ. ಎಲ್ಲವನ್ನೂ ಶಾಸಕರಿಂದ ಬಗೆ ಹರಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಯಾವ ರೀತಿ ಒಟ್ಟಾಗಿ ಕೆಲಸ ಮಾಡಿದ್ದೇವೋ ಅದೇ ರೀತಿಯಲ್ಲಿ ಮುಂದೆಯೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಯುನೈಟೆಡ್ ಜಮಾಅತ್‌ನ ಅಧ್ಯಕ್ಷರಾದ ಶಮೀರ್ ಪ್ರಾಸ್ತವಿಕವಾಗಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗಿ ಜಾತ್ಯಾತೀತವಾಗಿ ಇರುವ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಕಳೆದ ೨೦ ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದೆ ನಮ್ಮ ನೋವು ನಲಿವುಗಳನ್ನು ಯಾರ ಬಳಿಯು ಹೇಳಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸಮುದಾಯ ಬಾಂಧವರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದರು.

ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷರಾದ ಪಿ.ಸಿ.ಹಸೈನಾರ್, ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್, ಗೋಣಿಕೊಪ್ಪ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಸೇರಿದಂತೆ ಪ್ರಮುಖರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೀದೆರಿರ ನವೀನ್, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಜಮಾಅತ್‌ನ ಕಾರ್ಯದರ್ಶಿ ಅಬ್ದುಲ್ ಸಮ್ಮದ್ ನಿರೂಪಿಸಿದರು. ತನ್ವಿರ್ ಅಹಮ್ಮದ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಯುನೈಟೆಡ್ ಜಮಾಅತ್‌ನ ಪದಾಧಿಕಾರಿಗಳು ಹಾಜರಿದ್ದರು.