ಕೂಡಿಗೆ, ಜೂ. ೧೪: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವಿಪತ್ತು ನಿರ್ವಹಣಾ ತಂಡ ಆಶ್ರಯದಲ್ಲಿ ಕೂಡಿಗೆಯಲ್ಲಿ ಸೌಹಾರ್ದ ಪಂದ್ಯಾಟ ಹಮ್ಮಿಕೊಳ್ಳಲಾಯಿತು.
ಪೊಲೀಸ್ ಇಲಾಖೆ, ಪತ್ರಕರ್ತರು ಹಾಗೂ ಸ್ಥಳೀಯ ಆಟಗಾರರ ತಂಡದ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವಿಪತ್ತು ನಿರ್ವಹಣೆ ಹಿನ್ನೆಲೆಯಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯ, ಇಲಾಖೆಗಳೊಂದಿಗೆ ಸ್ಥಳೀಯ ಸಂಘಟನೆಗಳು, ಆಯಾ ಗ್ರಾಮದ ಯುವಪಡೆ, ಯುವಕರ ತಂಡ ಕೈಜೋಡಿಸಬೇಕೆನ್ನುವ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸಲು ಇಂತಹ ಸೌಹಾರ್ದ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ನಿರ್ದೇಶನದಂತೆ ಪಂದ್ಯಾಟಗಳನ್ನು ಹಮ್ಮಿಕೊಂಡು ವಿಪತ್ತು ನಿರ್ವಹಣೆಗೆ ಇತರರ ಸಹಭಾಗಿತ್ವ ಮುಖ್ಯ ಎಂಬುದನ್ನು ಮನದಟ್ಟು ಮಾಡುವ ಉದ್ದೇಶದಿಂದ ಎಲ್ಲರ ಸಹಕಾರ ಪ್ರಮುಖವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭ ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿದರು.
ಕುಶಾಲನಗರ ನಗರ ಠಾಣಾಧಿಕಾರಿ ಶ್ರೀಧರ್, ಸುಂಟಿಕೊಪ್ಪ ಠಾಣಾಧಿಕಾರಿ ರವೀಂದ್ರ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಅಧಿಕಾರಿ ವರ್ಗದವರು, ಸಿಬ್ಬಂದಿಗಳು, ಸ್ಥಳೀಯ ಕೂಡಿಗೆ, ಬ್ಯಾಡಗೊಟ್ಟ ಯುವಕರು ಭಾಗವಹಿಸಿದ್ದರು.