ಮಡಿಕೇರಿ, ಜೂ. ೧೩: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಕಚೇರಿಯನ್ನು ಇದೀಗ ಹೊಸದಾಗಿ ಪ್ರಾರಂಭಿಸಲಾಗಿದೆ. ನಗರದ ಕೊಹಿನೂರು ರಸ್ತೆಯಲ್ಲಿರುವ ಪಿ.ಎಲ್.ಡಿ. ಬ್ಯಾಂಕ್ ಕಟ್ಟಡದ ಎರಡನೇ ಮಹಡಿಯಲ್ಲಿ ನೂತನ ಕಚೇರಿ ತೆರೆಯಲಾಗಿದ್ದು, ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ಉಪಾಧ್ಯಕ್ಷ ಕರ್ನಲ್ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ಸುಬೇದಾರ್ ಮೇಜರ್ ವಾಸಪ್ಪ (ನಿ), ಖಜಾಂಚಿ ಕೆ.ಬಿ. ಮಾದಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ೯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು. ನೂತನ ಕಚೇರಿ ವಾರದಲ್ಲಿ ಎರಡು ದಿನ ಸೋಮವಾರ ಹಾಗೂ ಶುಕ್ರವಾರ ಬೆಳಿಗ್ಗೆ ೧೦ ರಿಂದ ಅಪರಾಹ್ನ ೧ ರತನಕ ಕಾಯನಿರ್ವಹಿಸಲಿದೆ. ಮಾಜಿ ಸೈನಿಕರು, ಸದಸ್ಯರು, ಅವಲಂಬಿತರು ತಮ್ಮ ಕುಂದು-ಕೊರತೆಗಳು, ನೋಂದಣಿ, ಮರು ನೋಂದಣಿ, ಮತ್ತಿತರ ವಿಚಾರಕ್ಕೆ ಉಪಯೋಗಪಡೆದುಕೊಳ್ಳಬಹುದು. ಹೆಚ್ಚಿನ ವಿವರಕ್ಕೆ ಕಾರ್ಯದರ್ಶಿ ಮೇಜರ್ ಚಿಂಗಪ್ಪ (೯೮೪೫೩೩೧೪೩೧) ಅವರನ್ನು ಸಂಪರ್ಕಿಸಬಹುದು.