ಮಡಿಕೇರಿ, ಜೂ. ೧೪: ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಕೊಟ್ಟುಕತ್ತೀರ ಪ್ರಕಾಶ್ ಬರೆದ ‘ಬೇರ್’ ಕೊಡವ ಪುಸ್ತಕವನ್ನು ವಿಧಾನ ಪರಿಷತ್ತು ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಬಿಡುಗಡೆ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚಲನಚಿತ್ರದ ಮೂಲಕ ಸಾಮಾಜಿಕ ಕಳಕಳಿಯನ್ನು ಮೂಡಿಸಿದ ಪ್ರಕಾಶ್ ಕಾರ್ಯಪ್ಪ ಪುಸ್ತಕದ ಮೂಲಕ ಯುವಜನತೆಗೆ ಸಂದೇಶ ನೀಡಿದ್ದಾರೆ. ಅಪಾರ ನಿರೀಕ್ಷೆಯಿಂದ, ಸತ್ಪçಜೆಯಾಗಿ ರೂಪುಗೊಳ್ಳುತ್ತಾರೆಂದು ಪೋಷಕರು ಮಕ್ಕಳನ್ನು ಬೆಳೆಸುತ್ತಾರೆ. ಅದು ಹುಸಿಯಾದಾಗ ಸಮಾಜದ ಮೇಲೆ ಬೀರುವ ಪರಿಣಾಮವನ್ನು ಬರಹದಲ್ಲಿ ಕಟ್ಟಿಕೊಡಲಾಗಿದೆ. ಇಂದಿನ ಯುವಜನಾಂಗ ಈ ಪುಸ್ತಕ ಓದಲೇಬೇಕು ಎಂದ ಅವರು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ೬೬ ಪುಸ್ತಕಗಳನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಇದೊಂದು ನಿಸ್ವಾರ್ಥ ಸೇವೆ ಎಂದು ಬಣ್ಣಿಸಿದರು.
‘ಶಕ್ತಿ’ ಸಲಹಾ ಸಂಪಾದಕ, ಜಾನಪದ ಪರಿಷತ್ತು ಅಧ್ಯಕ್ಷರೂ ಆದ ಬಿ.ಜಿ. ಅನಂತಶಯನ ಮಾತನಾಡಿ, ಹಣ, ಆಸ್ತಿಗಿಂತ ಅಪ್ಪ-ಅಮ್ಮನ ಬದುಕು ಮುಖ್ಯ. ಇಂದಿನ ಪೀಳಿಗೆಯ ಮನಸ್ಥಿತಿಯನ್ನು ಬರಹದ ಮೂಲಕ ಲೇಖಕರು ಅನಾವರಣ ಮಾಡಿದ್ದಾರೆ. ‘ಲಿವಿಂಗ್ ರಿಲೇಷನ್ ಶಿಪ್’ನ ಕರಾಳತೆಯನ್ನು ಬರೆದಿದ್ದಾರೆ. ಯುವಜನತೆ ಈ ಪುಸ್ತಕ ಓದಬೇಕು. ಜೊತೆಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರ ಹೆಗಲ ಮೇಲಿದೆ. ಇತ್ತೀಚಿಗೆ ಸಾಂಸಾರಿಕ ವಿಚಾರಗಳಿಗೆ ಒತ್ತು ನೀಡಿ ಸಾಹಿತಿಗಳು ಪುಸ್ತಕ ರಚಿಸುತ್ತಿದ್ದಾರೆ. ಇದಕ್ಕೆ ಸಮಾಜದಲ್ಲಿ ನಡೆಯುತ್ತಿರುವ ಕೌಟುಂಬಿಕ ಸಮಸ್ಯೆಗಳೇ ಕಾರಣವಾಗಿವೆ ಎಂದು ತಿಳಿಸಿದ ಅವರು, ಕೊಡಗಿನ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸಗಳು ನಡೆಯಬೇಕು. ಜಿಲ್ಲಾ ಪಂಚಾಯಿತಿ ಜಿಲ್ಲೆಯ ಲೇಖಕರ ಪುಸ್ತಕ ಖರೀದಿಸಿ ಎಲ್ಲಾ ಗ್ರಂಥಾಲಯ ಗಳಲ್ಲಿಡುವ ಕೆಲಸ ಮಾಡಬೇಕು. ಇದರೊಂದಿಗೆ ಜಿಲ್ಲೆಯಲ್ಲಿ ಎಲ್ಲಾ ಪುಸ್ತಕ ಒಂದೆಡೆ ಸಿಗುವ ‘ಪುಸ್ತಕ ಭಂಡಾರ’ ತೆರೆಯಲು ಯಾರಾದರೂ ಮುಂದೆ ಬರಬೇಕು ಎಂದು ಹೇಳಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಪತ್ರಕರ್ತರು ಮುಖ್ಯ. ಅದೇ ರೀತಿ ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕಗಳು ಸಹಕಾರಿ. ಬೇರು ಗಟ್ಟಿಯಾಗಿದ್ದರೆ ಮರ ಗಟ್ಟಿಯಾಗಿರುತ್ತದೆ. ಮಕ್ಕಳು ಹಾದಿ ತಪ್ಪದ ಹಾಗೆ ಪೋಷಕರು ನೋಡಿಕೊಳ್ಳಬೇಕು. ಆಚಾರ, ವಿಚಾರ, ಸಂಸ್ಕೃತಿಯನ್ನು ಕಲಿಸುವ ಕೆಲಸವಾಗಬೇಕು. ಕುಟುಂಬದಿAದ ದೂರವಾಗದಂತೆ ಮೌಲ್ಯಗಳನ್ನು ತುಂಬಬೇಕು ಎಂದು ಕರೆ ನೀಡಿದರು.
ಬರಹಗಾರ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಪರಕೀಯ ಸಂಸ್ಕೃತಿಗೆ ಪ್ರಭಾವಕ್ಕೆ ಒಳಗಾದರೆ ಆಗುವ ಪರಿಣಾಮಗಳನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಚೆಟ್ಟಳ್ಳಿ ಅವರ್ ಕ್ಲಬ್ ಅಧ್ಯಕ್ಷೆ ಐಚೆಟ್ಟೀರ ಸುನಿತಾ ಮಾಚಯ್ಯ ಹಾಜರಿದ್ದರು.