ಶ್ರೀಮಂಗಲ, ಜೂ. ೧೩: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣರಿಗೆ ಕೊಡವ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸದಸ್ಯರು ವಿಶೇಷ ರೀತಿಯಲ್ಲಿ ಅಭಿನಂದಿಸಿದರು.

ಕೊಡವ ಜನಾಂಗದ ಕೊರವುಕಾರರಿಗೆ ನೀಡುವ ವಿಶೇಷ ಗೌರವದ ಪ್ರತೀಕವಾಗಿರುವ ರೇಷ್ಮೆ ಪಟ್ಟ್ ವಸ್ತçವನ್ನು ಪೊನ್ನಣ್ಣರವರ ಹೆಗಲಿಗಿರಿಸಿ, ಪೊನ್ನಣ್ಣರವರ ಭಾವಚಿತ್ರವನ್ನೊಳ ಗೊಂಡ ಕೊಡವ ಜನಾಂಗದ ಗುರು ಕಾರೋಣ, ಕುಲಮಾತೆ ಕಾವೇರಿ, ಮಾಗುರು ಇಗ್ಗುತಪ್ಪ ದೇವರ ಆಶೀರ್ವಚನ ನೀಡುವ ವಿಶೇಷ ಫಲಕವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಆಯ್ಕೆ ಮಾಡುವಾಗ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದದ ವಿಶೇಷ ಅರಿವು ಇರುವ ಹಾಗೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮರ್ಥರನ್ನೇ ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು.

ಕೊಡವ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ಕೆಲವೇ ತಿಂಗಳಲ್ಲಿ ಭಾಷಾವಾರು ಅಕಾಡೆಮಿ ಮಾತ್ರ ಸಾಕು, ಪ್ರತ್ಯೇಕ ಕೊಡವ ಅಕಾಡೆಮಿ ಬೇಡವೆಂದು ಆಗ ಇದ್ದ ಸರ್ಕಾರ ಕೊಡವ ಅಕಾಡೆಮಿಯನ್ನು ಹಿಂಪಡೆಯುವ ಆದೇಶ ಹೊರಡಿಸಿದ್ದ ಸಂದರ್ಭ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಈ ಆದೇಶವನ್ನು ಪ್ರಬಲವಾಗಿ ವಿರೋಧಿಸಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದದ ಉಳಿಕೆ ಹಾಗೂ ಬೆಳವಣಿಗೆಗೆ ಅತ್ಯವಶ್ಯಕವೆಂದು ಕೊಡವ ಅಕಾಡೆಮಿಯನ್ನು ಉಳಿಸಿಕೊಂಡಿತು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಸಾಹಿತ್ಯ ಸಂಸ್ಕೃತಿಯ ಜ್ಞಾನವಿಲ್ಲದ ಆ ಕ್ಷೇತ್ರದಲ್ಲಿ ಸಾಧನೆ ಮಾಡದ ಕೇವಲ ರಾಜಕೀಯ ಪ್ರೇರಿತ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ತಮ್ಮ ಅವದಿಯಿಂದ ಈ ಅವ್ಯವಸ್ಥೆ ಕೊನೆಗಾಣಲಿ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದರೊಂದಿಗೆ ಅರ್ಹರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಉಪಾಧ್ಯಕ್ಷ ಚೆಂಬಾAಡ ಶಿವಿ ಭೀಮಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ನಿರ್ದೇಶಕ ಕಾಳಿಮಾಡ ಮೋಟಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.