ಕೂಡಿಗೆ, ಜೂ. ೧೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿ ಯಮ್ಮ ಗ್ರಾಮ ದೇವತೆಯ ಹಬ್ಬವು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಹಬ್ಬ ಅಂಗವಾಗಿ ಹಾರಂಗಿ ನದಿಯಿಂದ ಕಲಶ ತಂದು ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು. ನಂತರ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಶಾಂತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಎರಡನೇ ದಿನದಂದು ಬಲಿಹರಣ, ಪೂರ್ಣಾಹುತಿ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ವಾರ್ಷಿಕ ಪೂಜೋತ್ಸವ ಕಾರ್ಯಕ್ರಮದಲ್ಲಿ ಮಲ್ಲೇನಹಳ್ಳಿ, ಹೆಗ್ಗಡಹಳ್ಳಿ, ಮಾದಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು.