ಕುಶಾಲನಗರ, ಜೂ.೧೨: ಬುರ್ಖಾ ಧರಿಸಿದ ಮಹಿಳೆಯರ ತಂಡ ಪಟ್ಟಣದಲ್ಲಿ ಚಿನ್ನದ ಅಂಗಡಿ ಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಅಸಲಿ ಚಿನ್ನಾಭರಣಗಳನ್ನು ದೋಚಿ ನಕಲಿ ಚಿನ್ನಾಭರಣಗಳನ್ನು ಅಂಗಡಿಯಲ್ಲಿ ಇಟ್ಟು ವಂಚನೆ ಮಾಡುತ್ತಿರುವ ಪ್ರಕರಣಗಳು ಕುಶಾಲನಗರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಕುಶಾಲನಗರದ ಮುಖ್ಯ ರಸ್ತೆ ಮತ್ತು ರಥ ಬೀದಿಯಲ್ಲಿ ಎರಡು ಚಿನ್ನಾಭರಣ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಿಂದ ಎರಡು ಪ್ರಕರಣಗಳು ನಡೆದಿದ್ದು, ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಂಚಕರನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ.
ಬುರ್ಖಾ ಧರಿಸಿದ ಮಹಿಳೆಯರ ತಂಡ ಚಿನ್ನದ ಅಂಗಡಿಗೆ ಬಂದು ಚಿನ್ನ ಖರೀದಿಸುವ ನೆಪದಲ್ಲಿ ಅಸಲಿ ಚಿನ್ನವನ್ನು ತೆಗೆದು ತಮ್ಮಲ್ಲಿರುವ ನಕಲಿ ಚಿನ್ನವನ್ನು ಇಟ್ಟು ತೆರಳಿರುವ ಬಗ್ಗೆ ಅಂಗಡಿಗಳ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ. ಅಂದಾಜು ೪೦ ಗ್ರಾಂ ಅಸಲಿ ಚಿನ್ನ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬುರ್ಖಾ ಧರಿಸಿರುವ ಹಿನ್ನೆಲೆಯಲ್ಲಿ ಮುಖ ಪರಿಚಯ ಪತ್ತೆ ಮಾಡಲು ಕಷ್ಟಕರವಾಗಿದ್ದು, ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
- ಸಿಂಚು.