ವೀರಾಜಪೇಟೆ, ಜೂ. ೧೨: ಕೇರಳದಿಂದ ಪರವಾನಗಿ ಇಲ್ಲದೆ ಅಕ್ರಮವಾಗಿ ಜಿಲ್ಲೆಗೆ ಕೆಂಪು ಕಲ್ಲು, ಕೆತ್ತು ಕಲ್ಲು ಇಟ್ಟಿಗೆ, ಮರಳು, ಸೇರಿದಂತೆ ಇತರ ಸಾಮಗ್ರಿಗಳನ್ನು ಮಾಕುಟ್ಟ ಗಡಿ ಭಾಗದ ಮೂಲಕ ಸಾಗಿಸುತ್ತಿದ್ದ ವಾಹನಗಳಿಗೆ ಕಡಿವಾಣ ಹಾಕಲಾಗಿದೆ.
ಕಾನೂನು ಬಾಹಿರವಾಗಿ ಯಾವುದೇ ವಾಹನಗಳು ಜಿಲ್ಲೆಗೆ ಅಕ್ರಮವಾಗಿ ಪ್ರವೇಶ ಮಾಡಬಾರದು ಎನ್ನುವ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.
ಸೂಚಿನೆ ಹಿನ್ನೆಲೆಯಲ್ಲಿ ಪರವಾನಗಿ ಇಲ್ಲದೆ ಮಾಕುಟ್ಟದ ಮೂಲಕ ವೀರಾಜಪೇಟೆ ಕಡೆ ಬರುತ್ತಿದ್ದ ವಾಹನಗಳನ್ನು ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ತಡೆಹಿಡಿಯಲಾಗಿತ್ತು. ಜಿಲ್ಲೆಗೆ ಪ್ರವೇಶ ನಿರಾಕರಣೆ ಹಿನ್ನೆಲೆ ಸಾಲುಗಟ್ಟಿ ನಿಂತಿದ್ದ ವಾಹನಗಳು ಮರಳಿ ಕೇರಳ ಪ್ರವೇಶಿಸಿವೆ.
ಯಾವುದೇ ಪರವಾನಿಗೆ ಇಲ್ಲದ ಲಾರಿಗಳು ಇದುವರೆಗೆ ಕಾನೂನು ಬಾಹಿರವಾಗಿ ಜಿಲ್ಲೆಗೆ ಪ್ರವೇಶಿಸುತ್ತಿದ್ದು ಇದೀಗ ಈ ಅಕ್ರಮ ದಂಧೆಗೆ ಕಡಿವಾಣ ಹಾಕಲಾಗಿದೆ.
‘ಶಕ್ತಿ’ಗೆ ಪ್ರತಿಕ್ರಿಯಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡಗಿನಲ್ಲಿ ಅಕ್ರಮ ದಂಧೆ, ಭ್ರಷ್ಟಾಚಾರ ಎಲ್ಲವನ್ನು ಹಂತಹAತವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಕ್ರಮವಾಗಿ ಜಿಲ್ಲೆಗೆ ಹಾಗೂ ಜಿಲ್ಲೆಯ ಮೂಲಕ ಇತರೆಡೆಗಳಿಗೆ ಸಾಗಾಟ ಕ್ರಮವನ್ನು ವಿರೋಧಿಸುತ್ತೇನೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಇಲಾಖೆಗೆ ಸೂಚಿಸಿದ್ದೇನೆ ಎಂದರು.