ಮಡಿಕೇರಿ, ಜೂ. ೧೧: ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಎನ್.ಎಸ್. ಭೋಸರಾಜು ಅವರು ಜಿಲ್ಲೆಗೆ ಭೇಟಿ ನೀಡಿದರು.
ನಗರದ ಇಂದಿರಾ ಗಾಂಧಿ ವೃತ್ತಕ್ಕೆ ಸಚಿವರು ಆಗಮಿಸುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಆ ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಕಾರ್ಯಕರ್ತರ ಶ್ರಮ, ಮತದಾರರ ಆಶೀರ್ವಾದದಿಂದ ೨ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಶಾಸಕರ ಮೂಲಕ ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ಕಾರ್ಯಕರ್ತರು ಮುಂದಾಗಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ. ಕೊಡಗಿನಲ್ಲಿ ಅನುಭವಿ ರಾಜಕಾರಣಿಗಳಿದ್ದಾರೆ. ಗುಂಡೂರಾವ್ ಅವರು ಪಕ್ಷದ ಏಳಿಗೆಗೆ ಶ್ರಮಿಸಿ ಪ್ರಭಾವಿ ರಾಜಕಾರಣಿಯಾಗಿ ಬೆಳೆದು ನಿಂತರು ಎಂದು ಸ್ಮರಿಸಿದ ಅವರು, ಗ್ಯಾರಂಟಿ ಈಡೇರಿಕೆಯಿಂದ ಬಿಜೆಪಿಗೆ ತಲೆತಿರುಗಿದೆ. ಈ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕು. ಇದು ಕಾರ್ಯಕರ್ತರ ಜವಾಬ್ದಾರಿ ಯಾಗಿದೆ. ನಮಗೆ ಧರ್ಮದ ರಾಜಕಾರಣ ಬೇಕಿಲ್ಲ. ಸಂವಿಧಾನ ಬದ್ಧ ರಾಜಕಾರಣ ಮಾಡೋಣ. ಸರಕಾರ ಪರಿಪೂರ್ಣವಾಗಿ ಜನಪರವಾಗಿ ಶ್ರಮಿಸುತ್ತದೆ ಎಂದರು.
ಆಂತರಿಕವಾಗಿ ಗುದ್ದಾಟ ಮಾಡದೆ ಪಕ್ಷ ಸಂಘಟನೆಗೆ ಒಂದಾಗಿ ಶ್ರಮಿಸಿ. ಅಧಿಕಾರದ ಆಸೆ ಎಲ್ಲರಿಗೂ ಇರುತ್ತದೆ. ಎಲ್ಲರಿಗೂ ಅವಕಾಶ ನೀಡುವುದು ಅಸಾಧ್ಯ. ಇದನ್ನು ಅರಿತು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ೨ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅನುಭವಿ ನಾಯಕರು ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡಿದ್ದಾರೆ. ಕೊಡಗಿನ ಸರ್ವಾಂಗಿಣ ಅಭಿವೃದ್ಧಿ, ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅಗತ್ಯ ಸಲಹೆ ನೀಡಬೇಕು. ಮುಂದಿನ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಗೆಲುವು ದಾಖಲಿಸಬೇಕು. ಧರ್ಮದ ಆಧಾರದಲ್ಲಿ ಬಿಜೆಪಿ ಆಳುತಿತ್ತು. ಶಾಂತಿಯ ವಾತಾವರಣಕ್ಕೆ ನಾವು ಮುನ್ನುಡಿ ಬರೆಯಬೇಕು ಎಂದರು. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಾತನಾಡಿದರು.
ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಪ್ರಮುಖರಾದ ಟಿ.ಪಿ. ರಮೇಶ್, ಹೆಚ್.ಎಸ್. ಚಂದ್ರಮೌಳಿ, ಲೋಕೇಶ್, ಮಂಜುನಾಥ್ ಕುಮಾರ್, ಕಾಫಿ ಬೋರ್ಡ್ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.