ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂ. ೧೧: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಭಾನುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಬಿಡುಗಡೆ ಮೂಲಕ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಸಾಂಕೇತಿಕವಾಗಿ ಐವರು ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದರು. ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಮಧು ಬಂಗಾರಪ್ಪ, ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿ ಹರಿಪ್ರಸಾದ್, ಸಿ.ಎಸ್. ವಂದಿತಾ ಶರ್ಮಾ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಕೆ.ಸ. ಎಂಡಿ ಅನ್ಬುಕುಮಾರ್, ಬಿಎಂಟಿಸಿ ಎಂಡಿ ಸತ್ಯವತಿ ಉಪಸ್ಥಿತರಿದ್ದರು.
ಹಳೆಯ ವಿವಾದಕ್ಕೆ ೨ ಕುಟುಂಬಗಳ ನಡುವೆ ಘರ್ಷಣೆ : ಇಬ್ಬರು ಸಾವು
ಭೋಪಾಲ್, ಜೂ. ೧೧: ಹಳೆಯ ವಿವಾದಕ್ಕೆ ೨ ಕುಟುಂಬಗಳ ನಡುವೆ ಘರ್ಷಣೆ ಉಂಟಾಗಿದ್ದು, ಇಬ್ಬರು ಸಾವನ್ನಪ್ಪಿ ಓರ್ವನಿಗೆ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದ ದಿವಾಸ್ ಜಿಲ್ಲೆಯಲ್ಲಿ ನಡೆದಿದೆ. ಗೊಲಾ ಗುತನ್ ಗ್ರಾಮದಲ್ಲಿ ಗೋದಾರ ಮತ್ತು ದೇದಾದ್ ಕುಟುಂಬಗಳ ನಡುವೆ ಈ ಘರ್ಷಣೆ ನಡೆದಿದ್ದು, ಸತ್ವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್.ಪಿ. ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ. ಗೋದಾರ ಕುಟುಂಬದ ಮೂವರು ವ್ಯಕ್ತಿಗಳಿಗೆ ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ರಾಜೇಶ್ ಗೋದಾರ ಮತ್ತು ಕೈಲಾಸ ಗೋದಾರ ಸಾವನ್ನಪ್ಪಿದ್ದಾರೆ. ಕಾನೂನು ಸುವ್ಯವಸ್ಥೆ ನಿರ್ವಹಿಸಲು ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಗುಂಡಿನ ದಾಳಿ ಮತ್ತು ಸಾವುಗಳಿಗೆ ಸಂಬAಧಿಸಿದAತೆ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಘರ್ಷಣೆಗೆ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಮೃತ ಕೈಲಾಸ್ ಗೋದಾರ ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಗೋದಾರ ಅವರ ತಂದೆ ಎಂದು ತಿಳಿದುಬಂದಿದೆ.
ಭವಿಷ್ಯದಲ್ಲಿ ತಮಿಳು ಪ್ರಧಾನಿ ಸೊಲ್ಲೆತ್ತಿದ್ದ ಅಮಿತ್ ಶಾ!
ಚೆನ್ನೈ, ಜೂ. ೧೧: ಭವಿಷ್ಯದಲ್ಲಿ ತಮಿಳರನ್ನು ಪ್ರಧಾನಿಯನ್ನಾಗಿ ಮಾಡಲು ಕೇಂದ್ರ ಗೃಹ ಸಚಿವರು ಆಗಿರುವ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಸೊಲ್ಲೆತ್ತಿದ್ದಾರೆ ಎಂದು ಪಕ್ಷದ ಮೂಲಗಳು ಭಾನುವಾರ ತಿಳಿಸಿವೆ. ಚೆನ್ನೈಗೆ ಭೇಟಿ ನೀಡಿದ ವೇಳೆಯಲ್ಲಿ ತಮಿಳುನಾಡಿನ ಬಿಜೆಪಿ ಪದಾಧಿಕಾರಿಗಳೊಂದಿಗೆ ನಡೆಸಿದ ರಹಸ್ಯ ಸಭೆಯಲ್ಲಿ ಬಿಜೆಪಿಯ ಮಾಜಿ ರಾಷ್ಟಿçÃಯ ಅಧ್ಯಕ್ಷರು ಈ ರೀತಿಯ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ವಿವರಗಳು ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ತಮಿಳು ಪ್ರಧಾನಿ ಆಯ್ಕೆ ಕುರಿತಂತೆ ಅಮಿತ್ ಶಾ ಮಾತನಾಡಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಈ ಹಿಂದೆ ಎರಡು ಬಾರಿ ಇಂತಹ ಅವಕಾಶ ಕೈತಪ್ಪಿ ಹೋಗಿದೆ ಎಂದು ಅವರು ಹೇಳಿಕೆ ನೀಡಿದ್ದು, ಇದಕ್ಕೆ ಆಡಳಿತಾರೂಢ ಡಿಎಂಕೆಯನ್ನು ದೂಷಿಸಿದ್ದಾರೆ ಎನ್ನಲಾಗಿದೆ. ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಮತ್ತು ಈ ಉದ್ದೇಶಕ್ಕಾಗಿ ಬೂತ್ ಸಮಿತಿ ಬಲಪಡಿಸಲು ಬಿಜೆಪಿ ಪದಾಧಿಕಾರಿಗಳಿಗೆ ಷಾ ಪ್ರೋತ್ಸಾಹಿಸಿದ್ದಾರೆ ಎಂದು ಮೂಲಗಳು ವಿವರಿಸಿವೆ.
ಅಕ್ರಮವಾಗಿ ನಿರ್ಮಿಸಿದ ಟಿಪ್ಪು ಸುಲ್ತಾನ್ ಸ್ಮಾರಕ ಧ್ವಂಸ!
ಧುಲೆ, ಜೂ. ೧೧: ಮಹಾರಾಷ್ಟçದ ಧುಲೆ ಟ್ರಾಫಿಕ್ ಜಂಕ್ಷನ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ೧೮ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಸ್ಮಾರಕವನ್ನು ನಾಗರಿಕ ಸೇವಾ ಸಂಸ್ಥೆ ಧ್ವಂಸಗೊಳಿಸಿದೆ. ಮುಂಬೈನಿAದ ಸುಮಾರು ೩೨೨ ಕಿ.ಮೀ. ದೂರದಲ್ಲಿರುವ ಧುಲೆ ನಗರದ ವಡ್ಜೈ ರಸ್ತೆಯ ಇಂಟರ್ ಜಂಕ್ಷನ್ನಲ್ಲಿ ಆಲ್ ಇಂಡಿಯಾ ಇತ್ತೆಹಾದುಲ್ ಮಜ್ಲಿಸ್-ಎ-ಮುಸ್ಲಿಮೀನ್ ಶಾಸಕ ಫಾರೂಕ್ ಶಾ ಅನ್ವರ್ ಇದನ್ನು ನಿರ್ಮಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಪೊಲೀಸ್ ಬಂದೋಬಸ್ತ್ನಲ್ಲಿ ಶುಕ್ರವಾರ ಅದನ್ನು ಕೆಡವಲಾಯಿತು. ಶಾಸಕರೇ ಅದನ್ನು ತೆಗೆಯುವಂತೆ ತಿಳಿಸಿದ್ದರು.ಆದರೆ, ಜಿಲ್ಲಾಧಿಕಾರಿ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳ ಸಭೆಯ ನಂತರ ಸ್ಮಾರಕವನ್ನು ನೆಲಸಮಗೊಳಿಸಲಾಯಿತು ಎಂದು ಅವರು ಹೇಳಿದರು.
ಮಣಿಪುರ ಹಿಂಸಾಚಾರ: ತಾ. ೧೫ ರವರೆಗೆ ಇಂಟರ್ನೆಟ್ ಸ್ಥಗಿತ
ಇಂಫಾಲ, ಜೂ. ೧೧: ಬಿಕ್ಕಟ್ಟು ಪೀಡಿತ ಮಣಿಪುರ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಸರ್ಕಾರವು ತಾ. ೧೫ ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಗಳು ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಇಂಟರ್ನೆಟ್ ನಿಷೇಧವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಮಧ್ಯೆ, ಮಣಿಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಡಿಆರ್ ಸಪಂ ರಂಜನ್ ಶನಿವಾರ ಮಾತನಾಡಿ, ಕಳೆದ ೨೪ ಗಂಟೆಗಳಲ್ಲಿ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಇದು ರಾಜ್ಯವು ಸಹಜ ಸ್ಥಿತಿಗೆ ಮರಳುತ್ತಿರುವುದನ್ನು ಸೂಚಿಸುತ್ತದೆ ಎಂದಿದ್ದಾರೆ.
ದೇವಾಲಯದಲ್ಲಿ ನಮಾಜ್ ಮಾಡಿದ ಆರೋಪ: ವ್ಯಕ್ತಿಯ ಬಂಧನ
ಲಖನೌ, ಜೂ. ೧೧: ಚಂಡಿ ದೇವಾಲಯದಲ್ಲಿ ನಮಾಜ್ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ವರದಿಯಾಗಿದೆ. ದೇವಾಲಯ ಸಮಿತಿಯ ಪದಾಧಿಕಾರಿಯಾಗಿರುವ ಸತ್ಯನಾರಾಯಣ್ ಅಗರ್ವಾಲ್, ಕೊತ್ವಾಲಿ ನಗರದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ದೇವಾಲಯದಲ್ಲಿ ನಮಾಜ್ ಮಾಡಿದ ಬಗ್ಗೆ ದೂರು ನೀಡಿದ್ದರು. ನಮಾಜ್ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಹಾಪುರದ ಎಸ್ಪಿ ಅಭಿಷೇಕ್ ವರ್ಮಾ ಈ ಬಗ್ಗೆ ಮಾತನಾಡಿ ಸರಾಯ್ ಬಸ್ರತ್ ಅಲಿಯ ನಿವಾಸಿಯಾಗಿರುವ ಅನ್ವರ್, ಶುಕ್ರವಾರ ಬೆಳಿಗ್ಗೆ ದೇವಾಲಯದಲ್ಲಿ ನಮಾಜ್ ಮಾಡಿದ್ದ ಆರೋಪ ಕೇಳಿಬಂದಿದೆ. ಆತನನ್ನು ಬುಲಂದ್ ಶಹರ್ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.