ಶ್ರೀಮಂಗಲ, ಜೂ. ೧೧: ಕೊಡವ ಸಮಾಜಗಳು ತಮ್ಮ ಜನಾಂಗದ ಏಳಿಗೆಗಾಗಿ ಸೇವಾ ಕೇಂದ್ರಗಳಾಗಿ ಕೆಲಸ ಮಾಡಬೇಕೆಂದು ವೀರಾಜ ಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ‘ಜಾತಿವಾದಿಯಲ್ಲ ಅದರ ವಿರೋಧಿಯು ಅಲ್ಲ’ ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಎಂದೂ ಮಾಡುವುದಿಲ್ಲ. ಎಲ್ಲಾ ಜನಾಂಗಗಳು ತಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಸಂರಕ್ಷಣೆ ಸೌಹಾರ್ದತೆ, ಸಾಮರಸ್ಯದೊಂದಿಗೆ ಜನಾಂಗದ ಅಭಿವೃದ್ಧಿಪಡಿಸುವ ಕೆಲಸ ಮಾಡುವುದಾದರೆ ಅದಕ್ಕೆ ನನ್ನ ಸದಾ ಬೆಂಬಲವಿದೆ ಎಂದು ಹೇಳಿದರು.

ನನಗೆ ಯಾರು ಮತ ಹಾಕಿದ್ದಾರೆ ಅಥವಾ ಹಾಕಿಲ್ಲ ಎಂಬ ಚರ್ಚೆ ಈಗ ಅಪ್ರಸ್ತುತ. ಕೊಡಗಿನ ಸಮಗ್ರ ಅಭಿವೃದ್ಧಿ, ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತೇನೆ. ಇದು ನನ್ನೊಬ್ಬನಿಂದ ಸಾಧ್ಯವಿಲ್ಲ, ಎಲ್ಲರ ಸಹಕಾರದಿಂದ ನಡೆಸಲು ಸಾಧ್ಯ ಎಂದು ಹೇಳಿದರು.

ಕಾವೇರಿ ನದಿ ಕಲುಷಿತವಾಗಿದೆ, ಕಾವೇರಿ ನದಿ ಸಂರಕ್ಷಣೆಯ ಕೆಲಸವಾಗಬೇಕು. ಜಿಲ್ಲೆಯಲ್ಲಿ ೩೨ ಜಲಜೀವನ್ ಯೋಜನೆಯಲ್ಲಿ ೧೮ ಯೋಜನೆ ವೈಫಲ್ಯವಾಗಿದೆ. ಕಾವೇರಿ ನದಿ ಹುಟ್ಟುವ ಕೊಡಗಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ, ಜಿಲ್ಲೆಯಲ್ಲಿ ಮೂರು ಕುಡಿಯುವ ನೀರು ಯೋಜನೆ ಅಂಗೀಕಾರವಾಗಿಲ್ಲ. ಕೊಡಗು ಬಿಟ್ಟು ಬೆಂಗಳೂರು ಮೈಸೂರಿಗೆ ಉದ್ಯೋಗ ಅರಸಿ ಹೋಗಬೇಡಿ, ಇಲ್ಲಿನ ತೋಟಗದ್ದೆಗಳನ್ನು ನಿರ್ವಹಣೆ ಮಾಡಿಕೊಂಡು, ವಯಸ್ಸಾದ ತಂದೆ ತಾಯಿಗೆ ಆಸರೆಯಾಗಿ ಇರುವಂತೆ ಕರೆ ನೀಡಿದ ಅವರು, ಆದರೆ ಇಲ್ಲಿ ಹಲವಾರು ಮೂಲಭೂತ ಸಮಸ್ಯೆಗಳು ಇವೆ ಎಂದು ವಿಷಾದಿಸಿದರು.

೧೯೬೨ರಿಂದ ಅಜ್ಜಿಕುಟ್ಟಿರ ಅಪ್ಪಣ್ಣ ಅವರು ಶಾಸಕರಾಗಿದ್ದರು. ನಂತರ ಈ ವ್ಯಾಪ್ತಿಯಲ್ಲಿ ಸ್ಥಳೀಯ ಅಭ್ಯರ್ಥಿಯಾಗಿ ನಾನು ಶಾಸಕನಾಗಿದ್ದೇನೆ ಎಲ್ಲೂ ಅನ್ಯಾಯ ಮಾಡಿಲ್ಲ. ನನ್ನ ಯುಕ್ತಿ ಹಾಗೂ ಶಕ್ತಿ ಪ್ರತಿಭೆಯಿಂದ ಬೆಳೆದಿದ್ದೇನೆ. ಇಲ್ಲಿಯವರೆಗೆ ನನ್ನ ವೈಯಕ್ತಿಕ ಸಾಧನೆಗೆ ಯಾರ ಬಳಿಯೂ ಹೋಗಿ ಬೇಡಿಲ್ಲ. ನನ್ನ ತಾಯಿ ತಂದೆಯವರ ಹೆಸರಿನಲ್ಲಿ ನಡೆಸುತ್ತಿರುವ ದತ್ತಿ ನಿಧಿಗೆ ನನ್ನ ವೃತ್ತಿಜೀವನದಲ್ಲಿ ದುಡಿದು ಸಂಪಾದಿಸಿದ ಹಣದಿಂದ ಸಹಾಯ ಮಾಡುತ್ತಿದ್ದೇನೆ. ದತ್ತಿ ನಿಧಿಗೆ ಯಾರ ಬಳಿಯೂ ಒಂದು ಪೈಸೆ ಕೇಳಿಲ್ಲ ಎಂದು ಹೇಳಿದರು.

ಕೋವಿಹಕ್ಕು ೨೦೧೯ರಿಂದ ೨೦೨೯ ರವರೆಗೆ ನವೀಕರಣವಾಗಿದೆ. ಆದರೆ ೧೮೬೫ರಲ್ಲಿ ಇದ್ದ ವಿಶೇಷ ಕೋವಿ ಹಕ್ಕು ೨೦೧೯ರ ರಿಂದ ೨೦೨೯ರ ವರೆಗೆ ಮಾತ್ರ ಕೇಂದ್ರ ಸರ್ಕಾರ ನವೀಕರಣ ಮಾಡಿದೆ. ಇದರ ಬಗ್ಗೆ ಕೊಡವ ಸಮಾಜ ಒಕ್ಕೂಟ, ಅಖಿಲ ಕೊಡವ ಸಮಾಜ ಹಾಗೂ ಇತರ ಕೊಡವ ಸಮಾಜಗಳು ಚಿಂತಿಸಬೇಕಾಗಿದೆ. ೨೦೨೯ರ ನಂತರ ಕೋವಿ ಹಕ್ಕು ಏನಾಗುತ್ತದೆ. ೧೮೬೫ರಿಂದ ಇರುವ ವಿಶೇಷ ಕೋವಿ ಹಕ್ಕು ಶಾಶ್ವತವಾಗಿ ಮುಂದುವರೆಸಲು ಏನು ಮಾಡಬೇಕು. ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ವಾದ ಮಂಡಿಸುವವರು ಯಾರು? ಇದರ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಕೊಡವ ಸಮಾಜಗಳು ಈ ಬಗ್ಗೆ ಕೇಂದ್ರ ಸರಕಾರದ ಪ್ರತಿನಿಧಿ ಸಂಸದರ ಅಭಿಪ್ರಾಯ ಏನೆಂದು ಕೇಳಬೇಕು. ಸುಪ್ರೀಂ ಕೋರ್ಟಿನಲ್ಲಿ ಮತ್ತೆ ನವೀಕರಣಕ್ಕೆ ಪ್ರಯತ್ನಿಸುವುದಾದರೆ ವಕೀಲರನ್ನು ನೇಮಿಸುವವರು ಯಾರು ಇದರ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದರು. ಕೊಡವ ಜನಾಂಗದ ಕುಲಶಾಸ್ತç ಅಧ್ಯಯನ ನಿಂತುಹೋಗಿದೆ, ಇದರ ಬಗ್ಗೆ ಜನಾಂಗದ ಅಭಿಪ್ರಾಯ ಏನು ಇದರ ಬಗ್ಗೆ ಚರ್ಚೆಯಾU Àಬೇಕಾಗಿದೆ ಕೋವಿಹಕ್ಕು ಕುಲಶಾಸ್ತç ಅಧ್ಯಯನದ ಬಗ್ಗೆ ಜನಾಂಗದ ತೀರ್ಮಾನವನ್ನು ಕೊಡವ ಸಮಾಜ ಒಕ್ಕೂಟ, ಅಖಿಲ ಕೊಡವ ಸಮಾಜ, ಕೊಡವ ಸಮಾಜಗಳು ಕೈಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಸಮಾಜದ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ನಿರೂಪಿಸಿದರು. ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಸ್ವಾಗತಿಸಿ, ಗೌ.ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ವಂದಿಸಿದರು. ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ ಅತಿಥಿ ಪರಿಚಯ ಮಾಡಿದರು. ವೇದಿಕೆಯಲ್ಲಿ ಕೊಡವ ಸಮಾಜ ನ್ಯಾಯಪೀಠ ಅಧ್ಯಕ್ಷ ಚಿರಿಯಪಂಡ ಉಮೇಶ್ ಸಹಕಾರ್ಯದರ್ಶಿ ಆಲೇಮಾಡ ಸುಧೀರ್, ಆಡಳಿತ ಮಂಡಳಿ ನಿರ್ದೇಶಕರುಗಳಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಹಾಗೂ ಖಾಯಂ ಆಹ್ವಾನಿತರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಹಾಜರಿದ್ದರು. ವಿವಿಧ ಕೊಡವ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.