ಮರಗೋಡು, ಜೂ. ೧೨: ಕಡಗದಾಳು - ಮರಗೋಡು ಗ್ರಾಮವನ್ನು ಬೆಸೆಯುವ ರಸ್ತೆಯಾದ ಕತ್ತಲೆಕಾಡು- ಮರಗೋಡು ರಸ್ತೆ ಸಂಪೂರ್ಣ ಹದಗೆಟ್ಟು ಕತ್ತಲೆಯಲ್ಲಿದೆ. ಸರ್ಕಾರ, ಲೋಕೋಪಯೋಗಿ ಇಲಾಖೆ ಈ ಊರಿನ ರಸ್ತೆಯನ್ನು ಸಂಪೂರ್ಣ ಕಡೆಗಣಿಸಿದೆ. ಈ ರಸ್ತೆಯಲ್ಲಿ ದಿನನಿತ್ಯ ಹಲವಷ್ಟು ವಾಹನಗಳು ಸಂಚರಿಸುತ್ತವೆ. ಆದರೆ ಪ್ರಸ್ತುತ ರಸ್ತೆಯಲ್ಲಿ ಸಾಗುವುದು ಬಹಳ ತ್ರಾಸದಾಯಕÀವಾಗಿದೆ. ಅದಲ್ಲದೆ ಇದೀಗ ಚೆಟ್ಟಳ್ಳಿ ರಸ್ತೆಯ ಕಾವiಗಾರಿ ನಡೆಯುತ್ತಿದ್ದು ಹಲವಷ್ಟು ವಾಹನಗಳು ಬಸ್ಗಳು ಕಿರಿದಾದ ರಸ್ತೆಯಾದ ಇದೇ ಮಾರ್ಗವಾಗಿ ಸಂಚರಿಸುತ್ತಿವೆ. ದ್ವಿಚಕ್ರ ಸವಾರರಿಗೆ, ದಿನನಿತ್ಯ ಈ ರಸ್ತೆಯನ್ನು ಬಳಸುವವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕತ್ತಲೆಕಾಡು-ಮರಗೋಡು ರಸ್ತೆ ಯಾವಾಗ ಕತ್ತಲೆಯಿಂದ ಹೊರಬರುತ್ತದೆಂದು ಜನ ಕಾಯುತ್ತಿದ್ದಾರೆ. ದಿನನಿತ್ಯ ಈ ರಸ್ತೆಯಲ್ಲಿ ಕಿರಿಕಿರಿಯ ಸಂಚಾರ ಮಾಡುತ್ತಿದ್ದಾರೆ.
ಎತ್ತಿನಗಾಡಿ ಪಯಣ..! ವಾಹನಗಳು ಗುಜರಿಗೆ
ಕತ್ತಲೆಕಾಡಿನ ಜಂಕ್ಷನ್ನಿAದ ಕತ್ತಲೆಕಾಡು ಕಾಂಕ್ರಿಟ್ ರಸ್ತೆವರೆಗೆ, ಮತ್ತೆ ಹುಲಿತಾಳದಿಂದ ಮರಗೋಡುವರೆಗೆ ಸಂಚರಿಸುವುದು ಎತ್ತಿನಗಾಡಿಯಲ್ಲಿ ಸಂಚರಿಸಿದAತೆ. ದ್ವಿಚಕ್ರ, ಆಟೋ, ನಾಲ್ಕು ಚಕ್ರ ಹಾಗೂ ಬಸ್ ಅಥವಾ ಯಾವುದೇ ವಾಹನಗಳಲ್ಲಿ ತೆರಳಿದರೂ ರಸ್ತೆಯ ಗುಂಡಿಗಳನ್ನು ತಪ್ಪಿಸಲು ಪ್ರಯತ್ನಿಸಿದರೂ ವಾಹನದ ಚಕ್ರ ಬೀಳುವುದು ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಗೆ ಹೊರತು ರಸ್ತೆಯ ಮೇಲಂತೂ ಸಾಗುವುದಿಲ್ಲ. ಎತ್ತಿನಗಾಡಿಯಂತೆ ವಾಹನದ ಭಾಗಗಳು’ಝಣ ಝಣ’ ಎಂದು ಸದ್ದು ಮಾಡುತ್ತಾ ಸಾಗಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಯಾರಿಗಾದರೂ ಆರೋಗ್ಯ ಸಮಸ್ಯೆಯಾಗಿ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸಬೇಕೆಂದರೆ ಇನ್ನಷ್ಟು ಆರೋಗ್ಯದಲ್ಲಿ ಏರು ಪೇರಾಗುವುದು ಖಂಡಿತ. ಗರ್ಭಿಣಿಯರನ್ನೇನಾದರೂ ವಾಹನದಲ್ಲಿ ಕರೆದುಕೊಂಡು ಹೋದಲ್ಲಿ ರಸ್ತೆಯಲ್ಲೇ ಹೆರಿಗೆಯಾಗುವ ಭಯ ಜನರಲ್ಲಿ ಆವರಿಸಿದೆ. ವಾಹನಗಳನ್ನು ಕೊಂಡುಕೊಳ್ಳುವಾಗ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ. ಈ ತೆರಿಗೆಯ ಹಣವೆಲ್ಲ ಎಲ್ಲಿಗೆ ಸೇರುತ್ತಿದೆಯೋ ಯಾರ ಖಜಾನೆ ತುಂಬುತ್ತಿದೆಯೋ ತಿಳಿಯದು. ಆದರೆ ಜನಸಾಮಾನ್ಯರು ಮಾತ್ರ ರಸ್ತೆ ತೆರಿಗೆ ಜೊತೆಗೆ ಕಮಿಷನ್..ಪುಕ್ಕಟೆ ಹಣವನ್ನೆಲ್ಲ ಪಾವತಿಸಿ ವಾಹನ ನೋಂದಣಿ ಮಾಡಿಸಿ ಗುಂಡಿಮಯ ರಸ್ತೆಯಲ್ಲಿ ಸಂಚರಿಸಿ ವಾಹನವನ್ನು ಗುಜರಿಗೆ ಹಾಕಬೇಕಾದ ಪರಿಸ್ಥಿತಿ ಬಂದಿದೆ. ಇದರ ಬದಲು ಸರ್ಕಾರಕ್ಕೆ ರಸ್ತೆ ತೆರಿಗೆ ಪಾವತಿಸದೆ ವಾಹನವನ್ನು ಓಡಿಸುವ ಮೂಲಕ ಎಲ್ಲರೂ ಈ ರೀತಿಯಾದ ವ್ಯವಸ್ಥೆಯ ವಿರುದ್ಧ ಪುಟಿದೇಳಬೇಕಾಗಿದೆ ಎಂದು ಜನವಲಯದಲ್ಲಿ ಕೇಳಿ ಬರುತ್ತಿದೆ.
ಧೂಳಿನ ಸ್ನಾನ...!
ಬಿಸಿಲಿನ ದಿನಗಳಲ್ಲಿ ಈ ರಸ್ತೆಯಲ್ಲಿ ಸಾಗಿದರೆ ದ್ವಿಚಕ್ರ ವಾಹನ ಸವಾರರಿಗೆ ದೂಳಿನ ಸ್ನಾನ ತಪ್ಪುವುದೇ ಇಲ್ಲ. ರಸ್ತೆಯು ಸಂಪೂರ್ಣ ಗುಂಡಿಮಯ ವಾಗಿದ್ದು ವಾಹನಗಳು ರಸ್ತೆಯಿಂದ ಕೆಳಗಿಳಿದು ಮಣ್ಣಿನ ಮೇಲೆ ಸಂಚರಿಸ ಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಬಸ್ ಹಾಗೂ ಲಾರಿಯನ್ನು ಹಿಂಬಾಲಿಸುವ ದ್ವಿಚಕ್ರ ಸವಾರರಿಗೆ ಹಾಗೂ ದಾರಿ ಹೋಕರಿಗೆ ದೂಳಿನ ಸ್ನಾನ ನಿಶ್ಚಯವೇ ಆಗಿದೆ.
ಕಲ್ಲಿನ ನಡುವೆ ‘ಸರ್ಕಸ್’
ಕೆಲ ದಿನ ಹಿಂದೆ ಸುರಿದ ಧಾರಾಕಾರ ಮಳೆಯಿಂದ ನೀರು ಹರಿಯಲು ಸರಿಯಾದ ಚರಂಡಿ ಇಲ್ಲದೆ ನೀರಿನ ಹರಿವಿನ ರಭಸಕ್ಕೆ ರಸ್ತೆಯ ಬದಿ ಹಾಗೂ ರಸ್ತೆಯ ಕಲ್ಲುಗಳೆಲ್ಲ ಕೊಚ್ಚಿಕೊಂಡು ಬಂದು ರಸ್ತೆಯ ಮೇಲೆ ರಾಶಿ ಬಿದ್ದಿವೆ. ಇದರಿಂದ ದ್ವಿಚಕ್ರ ಸವಾರರಿಗೆ ‘ಆಫ್ ರೋಡ್’ನಲ್ಲಿ ಸಂಚರಿಸಿದ ಅನುಭವ ದೊರೆಯುತ್ತಿದೆ. ಬಸ್-ಲಾರಿಗಳು ಸಂಚರಿಸುವಾಗ ಕಲ್ಲುಗಳು ಚಕ್ರಕ್ಕೆ ಸಿಲುಕಿ ಪಾದಚಾರಿಗಳ ಮೇಲೆ ತೂರಿ ಬಂದ ನಿದರ್ಶನಗಳೂ ಇವೆ.
ಸುಂದರ ಪರಿಸರದ ನಾಶ
ಇತ್ತೀಚಿನ ದಿನಗಳಲ್ಲಿ ಕತ್ತಲೆಕಾಡಿಗೆ ಹಲವಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೆಲವರು ಪರಿಸರದ ಸೌಂದರ್ಯವನ್ನು ಸವಿಯಲು, ಮತ್ತೆ ಕೆಲವರು ತಮಗಿರುವ ದುಶ್ಚಟಗಳ ಸವಿಯಲು ಹಾಗೂ ಪುಂಡ ಪೋಕರಿಗಳು ಪ್ಲಾಸ್ಟಿಕ್ ಮತ್ತು ಮದ್ಯದ ಬಾಟಲಿಗಳನ್ನು ಕತ್ತಲೆಕಾಡಿನ ಬರೆಗೆ ಎಸೆದು ಸುಂದರವಾದ ಪರಿಸರವನ್ನು ನಾಶಮಾಡುತ್ತಿದ್ದಾರೆ. ಬೇಸರದ ವಿಷಯವೆಂದರೆ ಇಲ್ಲಿ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರು ಹಾಗೂ ಸುಮಾರು ೧೩ ಕಿಲೋ ಮೀಟರ್ ಸುತ್ತಮುತ್ತದ ಯುವ ತರುಣರು ಮಾದಕ ವಸ್ತುಗಳ ಸೇವನೆಗೆ ಈ ನಿರ್ಜನ ಪ್ರದೇಶವನ್ನು ಆಯ್ದುಕೊಂಡು ತಮ್ಮ ಚಟದಲ್ಲಿ ತೊಡಗಿರುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯಲ್ಲಿ ಇರುವ ಹಳೆಯದಾದ ಅನುಪಯುಕ್ತ ಬಟ್ಟೆ, ಚಪ್ಪಲಿ-ಶೂ ಗಳನ್ನು ಚೀಲದಲ್ಲಿ ತುಂಬಿ ಮತ್ತು ಮೀನು ಮಾರಾಟ ಮಾಡುವವರು ಹಳೆಯದಾದ ಮೀನುಗಳನ್ನು ಇಲ್ಲಿ ಎಸೆದು ಮೂಕಪ್ರಾಣಿಯಾದ ಮಂಗಗಳಿಗೆ ಆಹಾರ ಒದಗಿಸುತ್ತಿದ್ದಾರೆ...!! ಇದಕ್ಕೆಲ್ಲ ಗುಂಡಿಮಯವಾದ ರಸ್ತೆಯಿಂದಾಗಿ ವಾಹನಗಳ ಕಡಿಮೆ ಓಡಾಟವು ಒಂದು ಕಾರಣವಾಗಿದೆ.
ಹುಲಿತಾಳ- ಮರಗೋಡು ರಸ್ತೆ
ಕತ್ತಲೆಕಾಡಿನ ರಸ್ತೆಯಲ್ಲೆ ಮುಂದೆ ಸಾಗಿದರೆ ಸ್ವಲ್ಪ ದೂರದ ರಸ್ತೆ ಹೊರತುಪಡಿಸಿ ಹುಲಿತಾಳದಿಂದ ಮರಗೋಡುವರೆಗೆ ಸಾಗುವ ರಸ್ತೆ ಸ್ಥಿತಿಯೂ ಶೋಚನೀಯವಾಗಿದೆ. ದ್ವಿಚಕ್ರ ಸವಾರರ ಹಿಂದೆ ಕುಳಿತ ಮಹಿಳೆಯರಂತೂ ಜೀವ ಕೈಯಲ್ಲಿ ಹಿಡಿದು ಕೂರುವಂತಾಗಿದೆ. ರಸ್ತೆಯ ಉದ್ದಕ್ಕೂ ಗುಂಡಿಗಳಿದ್ದು ರಸ್ತೆಯ ಮಧ್ಯೆ ಅಲ್ಲಲ್ಲಿ ಪೈಪ್ ಅಳವಡಿಸಲು ಗುಂಡಿಗಳನ್ನು ತೆಗೆದಿರುವುದು ಕೂಡ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯ ತಿರುವುಗಳಿಂದ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಸುಸಜ್ಜಿತ ರಸ್ತೆ ನಿರ್ಮಾಣವಾಗುವುದರಿಂದ ಜನರಿಗೆ ಅನುಕೂಲವಾಗಲಿದೆ.
ಖಾಸಗಿ ಬಸ್ಸುಗಳಿಗೆ ಸಂಕಟ
ಹೌದು ಖಾಸಗಿ ಬಸ್ಸುಗಳಿಗಂತು ಈಗ ಇಂತಹ ರಸ್ತೆಗಳಲ್ಲಿ ಓಡಿಸುವುದೆಂದರೆ ಸಂಕಟವಾಗಿದೆ. ದುಬಾರಿ ರಸ್ತೆ ತೆರಿಗೆ, ಇನ್ಶೂರೆನ್ಸ್, ಎಫ್ಸಿ ಇವುಗಳಿಗೆಲ್ಲ ಹಣ ಪಾವತಿಸಿ ಕೆಲವೇ ಕೆಲವು ಪ್ರಯಾಣಿಕರನ್ನು ಹೊತ್ತು ಇಂತಹ ಗುಂಡಿಮಯ ರಸ್ತೆಯಲ್ಲಿ ಸಾಗಿ ಇಂಧನದ ಅತಿಯಾದ ಬಳಕೆಯಿಂದ ಲಾಭವೇ ಇಲ್ಲದೆ ಬಸ್ಸಿನ ನಿರ್ವಹಣೆಯೇ ಕಷ್ಟಕರವಾಗಿದೆ. ಕೊರೊನಾ ಹಾಗೂ ಪ್ರಯಾಣಿಕರ ಕೊರತೆ ಜೊತೆಗೆ ರಸ್ತೆ ಸಮಸ್ಯೆಗಳಿಂದ ಅದೆಷ್ಟೋ ಬಸ್ಗಳು ತಮ್ಮ ಪಯಣವನ್ನು ನಿಲ್ಲಿಸಿದ ಉದಾಹರಣೆಗಳು ಇವೆ.
ಮಳೆಗಾಲ ಆರಂಭ
ಸದ್ಯದಲ್ಲೇ ಮಳೆಗಾಲ ಆರಂಭವಾಗುತ್ತಿದ್ದು ಈ ಬಾರಿ ರಸ್ತೆಗೆ ಪುನರ್ ಜೀವ ಸಿಗುವುದು ಸಂಶಯವಾಗಿದೆ. ಮಳೆಗಾಲ ನೀರಿನ ಹರಿವಿಗೆ ರಸ್ತೆಯು ಸಂಪೂರ್ಣ ಕಿತ್ತು ಹೋಗಿ ಡಾಂಬರು ರಸ್ತೆ ಹೋಗಿ ಮಣ್ಣಿನ ರಸ್ತೆ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಸಂಬAಧಪಟ್ಟ ಇಲಾಖೆ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಹೀಗೆ ಹಲವಾರು ಸಮಸ್ಯೆಗಳಿಂದ ಕತ್ತಲೆಕಾಡು - ಮರಗೋಡು ರಸ್ತೆ ನರಳುತ್ತಿದ್ದು ಇತ್ತ ಯಾರೂ ಗಮನಹರಿಸಿದಂತೆ ಕಾಣುತ್ತಿಲ್ಲ. ಮಳೆ ಬಂತೆAದರೆ ಈ ಊರಿನಲ್ಲಿ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಅಂತೂ ಇರುವುದೇ ಇಲ್ಲ ಇದರ ಮಧ್ಯೆ ಕತ್ತಲೆಯ ರಸ್ತೆಯಲ್ಲಿ ದಾರಿ ದೀಪವು ಇಲ್ಲದೆ ಗುಂಡಿಮಯ ರಸ್ತೆಯಲ್ಲಿ ಸಾಗಬೇಕು. ಇದೀಗ ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಹಲವಷ್ಟು ವಾಹನಗಳು, ಬಸ್ಗಳು ಕತ್ತಲೆಕಾಡು-ಮರಗೋಡು ರಸ್ತೆ ಮೂಲಕ ತೆರಳುತ್ತಿವೆ. ಇದರಿಂದ ರಸ್ತೆ ಇನ್ನಷ್ಟು ಹದಗೆಡುವುದರಲ್ಲಿ ಸಂಶಯವಿಲ್ಲ. ಇದು ಕೇವಲ ಕತ್ತಲೆಕಾಡಿನ ರಸ್ತೆಯ ಸ್ಥಿತಿ ಮಾತ್ರವಲ್ಲ ಜಿಲ್ಲೆಯಲ್ಲಿ ಹಲವಷ್ಟು ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಲೋಕೋಪಯೋಗಿ ಇಲಾಖೆ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ರಸ್ತೆಯ ಪರಿಸ್ಥಿತಿಯ ಸಂಪೂರ್ಣ ಚಿತ್ರಣವನ್ನು ತಿಳಿಯಲು ಅಧಿಕಾರಿಗಳು ಬರುವುದಾದರೆ ರಾತ್ರಿಯ ವೇಳೆ ದ್ವಿಚಕ್ರ ವಾಹನದಲ್ಲಿ ಬರುವುದು ಉತ್ತಮ ಎಂಬುದು ಜನರ ಅಭಿಪ್ರಾಯವಾಗಿದೆ. -ಗಿರೀಶ್ಕಾಂತ್ ಪರಪ್ಪು