ಗೋಣಿಕೊಪ್ಪಲು, ಜೂ. ೧೨: ಸಾರ್ವಜನಿಕವಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ನಾನೆಂದು ಏಕಪಕ್ಷೀಯವಾಗಿ ಕೈಗೊಳ್ಳಲಾರೆ, ಮಂತ್ರಿಗಳಾಗಲಿ, ಶಾಸಕರಾಗಲಿ ನಿರ್ಧಾರ ಕೈಗೊಳ್ಳುವಾಗ ಅದು ಏಕಪಕ್ಷೀಯವಾಗಿರಬಾರದು. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವ ಬದಲು ಮತ್ತಷ್ಟು ಸಮಸ್ಯೆ ಉಲ್ಬಣಿಸ ಬಹುದು. ಬದಲಾಗಿ ಎಲ್ಲರೊಂದಿಗೂ ಸಾಧಕ ಬಾಧಕಗಳನ್ನು ಚರ್ಚಿಸಿ ನಿರ್ಧಾರ ಕೈಗೊಂಡಲ್ಲಿ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ವೀರಾಜಪೇಟೆ ಕ್ಷೇತ್ರದ ನೂತನ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಗೋಣಿಕೊಪ್ಪಲುವಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗೋಣಿಕೊಪ್ಪ ಸ್ಥಾನೀಯ ಚೇಂಬರ್ ಆಫ್ ಕಾಮರ್ಸ್ ಹಾಗೂ ದಿ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ ಸಹಯೋಗದಲ್ಲಿ ನೂತನ ಶಾಸಕರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸನ್ಮಾನ ಕಾರ್ಯಕ್ರಮ ವನ್ನು ಸ್ವೀಕರಿಸಿ ಮಾತನಾಡಿದ ಅವರು, ಗೋಣಿಕೊಪ್ಪ ನಗರವು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರದ ಅಭಿವೃದ್ದಿಗೆ ವರ್ತಕರೆಲ್ಲರೂ ಕೈ ಜೋಡಿಸಬೇಕು. ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವ ಪ್ರವಾಸಿಗರಿಗೆ ಉತ್ತಮ ವಾತಾವರಣ ನಿರ್ಮಾಣ ವಾಗಬೇಕು. ಕೆಲ ದಿನಗಳ ಹಿಂದೆ ಗೋಣಿಕೊಪ್ಪ ಮುಖ್ಯ ರಸ್ತೆಯನ್ನು ದಿಢೀರನೆ ಏಕಮುಖ ಸಂಚಾರ ಮಾಡಿದ್ದರು. ಈ ವೇಳೆ ಸಾಕಷ್ಟು ಮಂದಿ ದೂರವಾಣಿ ಮೂಲಕ ಸಮಸ್ಯೆಯನ್ನು ತೋಡಿಕೊಂಡಿದ್ದರು. ಈ ಸಂದರ್ಭ ಖುದ್ದಾಗಿ ಹಲವು ಹಿರಿಯರಿಗೆ ನಾನೇ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು. ದಿ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಮಾತನಾಡಿ, ಗೋಣಿಕೊಪ್ಪ ನಗರದ ಪಾಲಿಬೆಟ್ಟ ಜಂಕ್ಷನ್ ಹಾಗೂ ಪೊನ್ನಂಪೇಟೆ ಜಂಕ್ಷನ್‌ನಲ್ಲಿ ವಾರದ ಕೆಲವು ದಿನಗಳು ಪೋಲಿಸರನ್ನು ನಿಯೋಜಿಸಿ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸು ವಂತಾಗಬೇಕು. ನಗರಕ್ಕೆ ಟ್ರಾಫಿಕ್ ಪೊಲೀಸರನ್ನು ನಿಯೋಜನೆಗೊಳಿಸ ಬೇಕು. ಇದರಿಂದ ಇಲ್ಲಿಯ ಪ್ರಮುಖ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದರು. ದಿನನಿತ್ಯ ಸಂಗ್ರಹವಾಗುತ್ತಿ ರುವ ಘನತ್ಯಾಜ್ಯ ವಿಲೇವಾರಿ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮಾತನಾಡಿದರು. ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಗೋಣಿಕೊಪ್ಪ ನಗರದಲ್ಲಿ ಚೇಂಬರ್ ಸ್ಥಾನೀಯ ಸಮಿತಿ ಹಾಗೂ ಬ್ಯಾಂಕ್ ಬೆಳೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಹಿರಿಯರಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಎಂ.ಪಿ.ಕೇಶವ್ ಕಾಮತ್, ಎಫ್‌ಕೆಸಿಸಿನ ಕಾಡ್ಯಮಾಡ ಗಿರೀಶ್ ಗಣಪತಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗೋಣಿಕೊಪ್ಪ ಸ್ಥಾನೀಯ ಚೇಂಬರ್‌ನ ನಿರ್ದೇಶಕಿ ಚೇಂದAಡ ಸುಮಿ ಸುಬ್ಬಯ್ಯ, ಪ್ರಾರ್ಥಿಸಿ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಸ್ವಾಗತಿಸಿ, ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ಪ್ರಮುಖರಾದ ಗಣೇಶ್‌ರೈ, ರಾಜಶೇಖರ್, ಎ.ಜೆ. ಬಾಬು, ಕಾಂತರಾಜ್, ಕಳ್ಳಿಚಂಡ ನೋಬನ್, ಎಂ.ಬಿ. ನಾಸೀರ್, ಡಾ.ಚಂದ್ರಶೇಖರ್, ಡಾ.ಶಿವಪ್ಪ, ಧ್ಯಾನ್ ಸುಬ್ಬಯ್ಯ, ಮಳವಂಡ ಅರವಿಂದ್ ಕುಟ್ಟಪ್ಪ, ಹೆಚ್.ವಿ. ಕೃಷ್ಣಪ್ಪ, ಉಮ್ಮರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.