ಕುಶಾಲನಗರ, ಜೂ. ೧೧: ಕ್ಷೇತ್ರದಲ್ಲಿ ಆರೋಗ್ಯ ಮತ್ತು ಕುಡಿಯುವ ನೀರು ಸಂಪರ್ಕ ವ್ಯವಸ್ಥೆಗಳನ್ನು ಉತ್ತಮ ಪಡಿಸಲು ಆದ್ಯತೆ ನೀಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕಾರ್ಯ ನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಶನಿವಾರ ಇಲ್ಲಿನ ಸುದ್ದಿಮನೆಯಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಆರೋಗ್ಯ ಸಮುದಾಯ ಕೇಂದ್ರವನ್ನು ಸುಸಜ್ಜಿತಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದ ಡಾ.ಮಂಥÀರ್ ಗೌಡ ಹಿಂದಿನ ಶಾಸಕರು ಸಲಹೆ ಕೊಟ್ಟರೆ ಸ್ವೀಕರಿಸಲಾಗುವುದು. ಕ್ಷೇತ್ರಕ್ಕೆ ಒಳ್ಳೆಯದಾಗುವುದಾದರೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ.

ನಾಡಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ವಿನಾಕಾರಣ ಅಲೆದಾಡಿಸಿದರೆ, ಲಂಚದ ಬೇಡಿಕೆ ಇಟ್ಟರೆ ಅಥವಾ ಬೇರೆ ರೀತಿಯಲ್ಲಿ ತೊಂದರೆ ಕೊಟ್ಟರೆ ಅಂಥ ಅಧಿಕಾರಿ ಗಳ ಬಗ್ಗೆ ತನಗೆ ಮಾಹಿತಿ ಕೊಟ್ಟಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಲಾಗುವುದು. ಕೆಲವರು ಹಲವಾರು ವರ್ಷಗಳಿಂದ ಒಂದೇ ಕಡೆ ಕುಳಿತಿದ್ದು, ಅವರಿಗೂ ಬೇರೆ ಜಾಗ ತೋರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಮಡಿಕೇರಿಯಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಡಿಪೋ ಇದೆ. ಕುಶಾಲನಗರಕ್ಕೆ ಮಂಜೂರು ಆಗಿರುವ ಡಿಪೋ ಕಾರ್ಯಾಚರಣೆ ಆರಂಭಿಸಿ ದರೆ ಸರ್ಕಾರಿ ಬಸ್ಸುಗಳ ಸಂಚಾರ ಸಮಸ್ಯೆಗೆ ಪರಿಹಾರ ಸಿಗಬಹುದು. ಇದರ ಜೊತೆಗೆ ಇನ್ನೂ ೨-೩ ಡಿಪೋಗಳನ್ನು ಸ್ಥಾಪಿಸಿ ಕೊಡಗನ್ನು ಪ್ರತ್ಯೇಕ ಕೆಎಸ್‌ಆರ್‌ಟಿಸಿ ವಿಭಾಗ ಮಾಡುವ ಚಿಂತನೆಯೂ ಇದ್ದು, ಸಾಧ್ಯಾಸಾಧ್ಯತೆ ಬಗ್ಗೆ ಸಾರಿಗೆ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಗಿಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಹೆಚ್ಚು ಇದೆ. ಆದಷ್ಟು ಬೇಗ ಇದು ಜಿಲ್ಲೆಯಲ್ಲಿ ಕಾರ್ಯಾರಂಭ ಆಗಬೇಕು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ನವೆಂಬರ್‌ನಲ್ಲಿ ಕಾಮಗಾರಿ ಮುಗಿ ಯುವ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಅಗತ್ಯ ತಜ್ಞವೈದ್ಯರು, ಸಲಕರಣೆಗಳ ವ್ಯವಸ್ಥೆ ಮಾಡಿದ ನಂತರ ಆಸ್ಪತ್ರೆ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಮೆಡಿಕಲ್ ಟೂರಿಸಂಗೂ ಅವಕಾಶ ಇದೆ ಎಂದರು.

ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ವರ್ಷ ಪೂರ್ತಿ ಕ್ರೀಡಾಕೂಟಗಳ ಆಯೋಜನೆ ಆಗುತ್ತಿರುತ್ತದೆ. ಹಾಗಾಗಿ ಜಿಲ್ಲೆಗೆ ಸುಸ ಜ್ಜಿತ ಕ್ರೀಡಾಂಗಣಗಳ ಬೇಡಿಕೆಯಿದೆ. ಒಳಾಂಗಣ ಕ್ರೀಡಾಂಗಣದ ಅವಶ್ಯಕತೆ ಕುಶಾಲನಗರಕ್ಕೆ ಹೆಚ್ಚು ಅಗತ್ಯವಿದೆ. ಈ ಸಂಬAಧ ಸ್ಥಳೀಯ ಆಡಳಿತದ ಜತೆಗೆ ಚರ್ಚಿಸಿ ಮುಂದೆ ಏನು ಮಾಡಬ ಹುದು ಎನ್ನುವುದರ ಚಿಂತನೆ ನಡೆಸ ಲಾಗುತ್ತದೆ ಎಂದು ಹೇಳಿದರು.

ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬಂದಿದ್ದರೂ ಕಂದಾಯ ಸೇರಿದಂತೆ ಬಹುತೇಕ ಇಲಾಖೆಗಳ ದಾಖಲೆಗಳು ಸೋಮವಾರಪೇಟೆ ಯಲ್ಲೇ ಇದೆ. ಇದರಿಂದ ಸಾರ್ವ ಜನಿಕರು ಈಗಲೂ ಸೋಮವಾರ ಪೇಟೆಗೆ ಹೋಗಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಲು ಎಲ್ಲಾ ದಾಖಲೆಗಳು ಕುಶಾಲನಗರಕ್ಕೆ ಬರಬೇಕು. ಇದಕ್ಕಾಗಿ ಕುಶಾಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಆಗಬೇಕಿದೆ. ಎಲ್ಲಾ ಇಲಾ ಖೆಗಳ ಕಚೇರಿಗಳು ಒಂದೆಡೆ ಇದ್ದರೆ ಸಾರ್ವಜನಿಕರಿಗೂ ಅನುಕೂಲ. ಈ ನಿಟ್ಟಿನಲ್ಲಿ ಗಮನಹರಿಸಲಾಗುವುದು.

ಸೋಮವಾರಪೇಟೆ ಭಾಗದಲ್ಲಿ ಉತ್ತಮ ಪ್ರವಾಸಿ ತಾಣಗಳು ಇದ್ದರೂ ಜಿಲ್ಲೆಯ ಉಳಿದ ಪ್ರವಾಸಿ ತಾಣಗಳಂತೆ ಪ್ರಸಿದ್ಧವಾಗಿಲ್ಲ. ಹಾಗಾಗಿ ಇಲ್ಲಿಗೂ ಪ್ರವಾಸಿಗರು ಆಗಮಿಸುವಂತಾಗಲು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ರಸ್ತೆ ಸಂಪರ್ಕ ಜಾಲ ಉತ್ತಮಪಡಿಸಲಾಗುವುದು. ಪರಿಸರಕ್ಕೆ ಪೂರಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕುಶಾಲನಗರ ಪಟ್ಟಣದಲ್ಲಿ ಟ್ರಾಫಿಕ್ ಪೊಲೀಸರ ದೌರ್ಜನ್ಯ ಜಾಸ್ತಿ ಆಗುತ್ತಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಪತ್ರಕರ್ತರೊಬ್ಬರು ಶಾಸಕರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಡಾ. ಮಂಥರ್ ಗೌಡ, ವಾಹನ ಸವಾರರು, ಚಾಲಕರು ಮೊದಲು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮರಾ ಹಾಕಬೇಕು. ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ನಿಲ್ಲುವುದು ಕಡಿಮೆ ಮಾಡಬೇಕು. ತಂತ್ರಜ್ಞಾನ ಬಳಕೆ ಹೆಚ್ಚಬೇಕು. ಟಾರ್ಗೆಟ್‌ಗಾಗಿ ಕೆಲಸ ಮಾಡಬಾರದು. ಕಾನೂನು ಪಾಲಿಸಬೇಕು. ಈ ವಿಷಯವನ್ನು ಎಸ್‌ಪಿ ಗಮನಕ್ಕೆ ತರಲಾಗುವುದು. ಕುಶಾಲನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಗೆ ಕಡಿವಾಣ ಹಾಕಲು ಬಹುಮಹಡಿ ಕಾರ್ ಪಾರ್ಕಿಂಗ್‌ನ ಚಿಂತನೆ ಇದ್ದು, ಇದಕ್ಕಾಗಿ ಜಾಗದ ಹುಡುಕಾಟ ನಡೆದಿದೆ ಎಂದರು.

ಹಾರAಗಿ ಜಲಾಶಯದಲ್ಲಿ ಸುಮಾರು ೧.೫ ಟಿಎಂಸಿಯಷ್ಟು ಹೂಳಿನ ಸಂಗ್ರಹ ಇದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಹೂಳೆತ್ತುವ ಕಾಮಗಾರಿಗೆ ಅಲ್ಲಲ್ಲಿ ಅಲ್ಪಸ್ವಲ್ಪ ನಡೆದಿದೆ. ಮೊದಲು ಹೂಳು ತೆಗೆದು ನಂತರ ಉಳಿದ ಕಾಮಗಾರಿ ಆರಂಭಿಸುವAತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಲಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಹಳ್ಳಿಗಳಿಗೂ ನಲ್ಲಿಗಳನ್ನು ಹಾಕಲಾಗಿದೆ. ಆದರೆ ಎಲ್ಲಿಯೂ ನೀರು ಬರುತ್ತಿಲ್ಲ. ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೂ ಮೊದಲು ನೀರಿನ ಮೂಲಗಳನ್ನು ಗುರುತಿಸುವಲ್ಲಿ ಎಡವಿದ್ದರಿಂದ ಜಲಜೀವನ್ ಮಿಷನ್ ಬಹುತೇಕ ಕಡೆಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕಾಡಾನೆಗಳಿಂದ ಅರಣ್ಯದಂಚಿನ ತೋಟದವರಿಗೂ ರಕ್ಷಣೆ ಕೊಡಬೇಕಾ ಗುತ್ತದೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಕುಶಾಲನಗರ ಪಟ್ಟಣಕ್ಕೆ ಹಾರಂಗಿ ಮೂಲಕ ರಿಂಗ್ ರೋಡ್ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಕುಶಾಲನಗರದಲ್ಲಿ ಯುಜಿಡಿ ಆಗಲೇಬೇಕು. ಇದರಿಂದ ಮಾತ್ರ ನಗರದ ಅಭಿವೃದ್ಧಿ ಸಾಧ್ಯ. ಜಿಲ್ಲೆಗೆ ರೈಲ್ವೆ ಮಾರ್ಗದ ಪ್ರಸ್ತಾವನೆ ಪರಿಶೀಲಿಸಿ ಈಗಿನ ಹಂತ ಏನಾಗಿದೆ ಎನ್ನುವುದರ ಬಗ್ಗೆ ಸಂಸದರ ಜತೆ ಮಾತನಾಡಲಾಗುವುದು. ಕಾರ್ಮಿಕರು, ಮಳೆಹಾನಿ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಗಮನಹರಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಜಿ.ಪಂ. ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಮುಖಂಡ ನಟೇಶ್ ಗೌಡ ಇದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕರಾದ ಟಿ.ಆರ್. ಪ್ರಭುದೇವ್ ಕಾರ್ಯಕ್ರಮ ನಿರೂಪಣೆ, ರಘು ಹೆಬ್ಬಾಲೆ ವಂದಿಸಿದರು.