ಮಡಿಕೇರಿ, ಜೂ. ೯: ಕಳೆದ ಹದಿನೈದು ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ ಪತ್ನಿಯ ತಿಥಿ ಕರ್ಮಾಂತರಕ್ಕೆAದು ಆಗಮಿಸುತ್ತಿದ್ದ ಪತಿ ಕೂಡ ಮಾರ್ಗ ಮಧ್ಯೆ ವಿಧಿಲೀಲೆಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಮೂಲತಃ ಚೆಟ್ಟಿಮಾನಿ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೆದಂಬಾಡಿ ರಾಜು ಮೃತರಾದ ದುರ್ದೈವಿ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ರಾಜು ಅವರ ಪತ್ನಿ ಜಾನಕಿ ಅನಾರೋಗ್ಯದಿಂದಾಗಿ ಕಳೆದ ತಾ. ೨೬ರಂದು ನಿಧನರಾಗಿದ್ದರು. ಅವರ ತಿಥಿ ಕರ್ಮಾಂತರ ತಾ. ೧೦ರಂದು ಚೆಟ್ಟಿಮಾನಿಯಲ್ಲಿ ನಡೆಯುವುದರಲ್ಲಿತ್ತು. ಪತ್ನಿ ಅಗಲಿಕೆ ನಂತರ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ರಾಜು ಅವರು ವೈದ್ಯರ ಅನುಮತಿ ಪಡೆದು ತಿಥಿ ಕರ್ಮಾಂತರಕ್ಕೆAದು ನಿನ್ನೆ ಚೆಟ್ಟಿಮಾನಿಯತ್ತ ಪಯಣ ಬೆಳೆಸಿದ್ದು, ಕುಶಾಲನಗರದ ತಮ್ಮ ಸಹೋದರಿ ಮನೆಗೆ ಬಂದಿದ್ದಾರೆ. ನಂತರ ಅಲ್ಲಿಂದ ತಮ್ಮ ಸಂಬAಧಿಕರಾದ ವೈದ್ಯರೋರ್ವರ ಮನೆಗೆ ತೆರಳಿದ್ದಾರೆ. ರಾತ್ರಿ ೯ ಗಂಟೆ ವೇಳೆಗೆ ಕೊಂಚ ಅಸ್ವಸ್ಥರಾದವರನ್ನು ವೈದ್ಯರು ಪರಿಶೀಲಿಸಿ ಮಡಿಕೇರಿ ಆಸ್ಪತ್ರೆಗೆ ಕರೆ ತಂದಿದ್ದು, ಆ ವೇಳೆಗಾಗಲೇ ರಾಜು ಅಸುನೀಗಿದ್ದರು. ಪತ್ನಿಯ ಕ್ರಿಯೆ ಮಾಡಲೆಂದು ಆಗಮಿಸಿದ ಪತಿ ಕೂಡ ವಿಧಿವಶರಾಗಿರುವುದರಿಂದ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ. ಕೊಡುಗೈ ದಾನಿಯೂ ಆಗಿರುವ ರಾಜು ಅವರ ನಿಧನಕ್ಕೆ ಇಡೀ ಗೌಡ ಸಮುದಾಯವೇ ಕಂಬನಿ ಮಿಡಿಯುತ್ತಿದೆ. ಮೃತರ ಈರ್ವರು ಪುತ್ರರು ಅಮೇರಿಕಾದಲ್ಲಿದ್ದು, ಅಂತ್ಯಕ್ರಿಯೆ ತಾ. ೧೧ರಂದು ನೆರವೇರಲಿದೆ. ಇತ್ತ ತಾ. ೧೦ರಂದು ನಡೆಯಬೇಕಿದ್ದ ಪತ್ನಿ ಜಾನಕಿಯವರ ತಿಥಿ ಕರ್ಮಾಂತರವನ್ನು ಮುಂದೂಡಲಾಗಿದೆ.