ಕಣಿವೆ, ಜೂ. ೧೦: ಕುಶಾಲನಗರ ತಾಲೂಕು ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡಿರುವ ಮುಸುಕಿನ ಜೋಳದ ಬೆಳೆ ಮಳೆಯ ಕೊರತೆಯ ನಡುವೆಯೂ ಹುಲುಸಾಗಿ ಬೆಳೆಯುತ್ತಿದೆ.
ಇದೀಗ ಎರಡು ಮೂರು ದಿನಗಳ ಒಳಗೆ ಜೋಳಕ್ಕೆ ತುರ್ತಾಗಿ ಮಳೆ ಆಗಲೇಬೇಕಿದೆ. ಇಲ್ಲವಾದಲ್ಲಿ ಬೆಳೆ ಬಿಸಿಲಿಗೆ ಸಿಲುಕಿ ಒಣಗುವ ಅಪಾಯವೇ ಹೆಚ್ಚಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಜೋಳದ ಬಿತ್ತನೆಯಾಗಿ ೧೫ ರಿಂದ ೨೦ ದಿನಗಳು ಕಳೆದಿರುವ ಈ ಮುಸುಕಿನ ಜೋಳದ ಬೆಳೆಗೆ ಇದೀಗ ರೈತರು ನೇಗಿಲು ಬಿಡುವ ಕಾಯಕದಲ್ಲಿ ತೊಡಗಿದ್ದಾರೆ.
ನೇಗಿಲು ಬಿಡುವುದು ಎಂದರೆ ಜೋಳದ ಹೊಲದಲ್ಲಿ ಜೋಳದೊಂದಿಗೆ ಬೆಳೆದು ನಿಂತ ಕಳೆಯ ಗಿಡಗಳನ್ನು ತೆಗೆಯುವ ಜೊತೆಗೆ ಜೋಳದ ಬುಡಕ್ಕೆ ಮಣ್ಣು ಏರು ಹಾಕುವುದಾಗಿದೆ. ಇದರಿಂದಾಗಿ ಜೋಳದ ಬಳ್ಳಿಗಳು ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಎತ್ತುಗಳಿಂದ ನೇಗಿಲು ಬಿಡುವ ಈ ಕಾಯಕಕ್ಕೆ ದಿನವೊಂದಕ್ಕೆ ೧೫೦೦ ರಿಂದ ೨೦೦೦ ರೂಪಾಯಿಗಳ ಕೂಲಿ ಕೊಡಬೇಕಾಗುತ್ತದೆ. ಜೋಳವನ್ನು ಬಿತ್ತನೆ ಮಾಡುವ ಪೂರ್ವದಲ್ಲಿ ಟ್ರಾö್ಯಕ್ಟರ್ಗಳಿಂದ ಭೂಮಿಯ ಉಳುಮೆ ಮಾಡಿ ಸಿದ್ಧ ಮಾಡುವ ಕೃಷಿಕರು ಜೋಳದ ಬಿತ್ತನೆಯ ಬಳಿಕ ಎತ್ತುಗಳನ್ನು ಬಳಸಿಯೇ ನೇಗಿಲು ಬಿಡಬೇಕಿದೆ. ಜೋಳದ ಬೆಳೆಗೆ ಇದೀಗ ತುರ್ತಾಗಿ ಮಳೆ ಬೇಕಿದೆ. ಹಾಗಾಗಿ ಕೆಲವೆಡೆಗಳಲ್ಲಿ ಮಧ್ಯಾಹ್ನದ ಬಿರುಬಿಸಿಲಿಗೆ ಜೋಳದ ಗಿಡಗಳು ಬಾಡುತ್ತಿವೆ.
ನೀರಾವರಿ ಸೌಕರ್ಯ ಉಳ್ಳವರು ಜೋಳದ ಬೆಳೆಗೆ ನೀರು ಹರಿಸಿಕೊಳ್ಳುತ್ತಾರೆ. ಅರೆ ನೀರಾವರಿಯವರು ಮಳೆಯನ್ನೇ ಕಾಯಬೇಕಿದೆ. ಆದ್ದರಿಂದ ಸಕಾಲಿಕವಾಗಿ ಮಳೆ ಬಂದರೆ ಬೆಳೆ, ಇಲ್ಲದಿದ್ದಲ್ಲಿ ಜೋಳದ ಬೆಳೆ ಒಣಗುವ ಅಪಾಯವಿದೆ.
- ಕೆ.ಎಸ್. ಮೂರ್ತಿ