ಮಡಿಕೇರಿ, ಜೂ. ೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿ ಯಿಂದ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕಾರ್ಯ ಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಕನ್ನಡ ನಾಡಿಗೆ ಚಿರಸ್ಮರಣೀಯವಾದುದು. ಸುಮಾರು ೧೦೮ ವರ್ಷಗಳ ಹಿಂದೆ ಕಸಾಪವನ್ನು ಸ್ಥಾಪನೆ ಮಾಡುವ ಸಂದರ್ಭ ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಮೊದಲಾದವರ ಕೋರಿಕೆಗೆ ಬೆಂಬಲ ಸೂಚಿಸಿದ ನಾಲ್ವಡಿಯವರು ಆರಂಭಿಕವಾಗಿ ಪರಿಷತ್ತಿಗೆ ೫ ಸಾವಿರ ರೂಗಳ ಧನ ಸಹಾಯ ಮಾಡುವ ಮೂಲಕ ಪರಿ ಷತ್ತನ್ನು ಕಟ್ಟಿ ಬೆಳೆಸಿದ ಮಹನೀ ಯರನ್ನು ಕಸಾಪ ನಾಡಿನಾದ್ಯಂತ ಇಂದು ಸ್ಮರಿಸುತ್ತಿದೆ ಎಂದು ಹೇಳಿದರು. ನಾಡಿನ ಜನ ಕಲ್ಯಾಣದ ಹಿತದೃಷ್ಟಿಯಿಂದ ತಮ್ಮ ಮಡದಿಯ ಒಡವೆಗಳನ್ನು ಮಾರಾಟ ಮಾಡಿ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟುವ ಮೂಲಕ ರಾಜ್ಯದ ರೈತರ ಮನೆಗಳಲ್ಲಿ ಬೆಳಕಾದ ಮಹನೀಯರ ಸಾಧನೆಗಳ ಬಗ್ಗೆ ರಮೇಶ್ ವಿವರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗೌರವ ಕಾರ್ಯದರ್ಶಿ ಡಿ.ಎಂ. ರೇವತಿ ರಮೇಶ್, ಜಿಲ್ಲಾ ನಿರ್ದೇಶಕ ರಾದ ಫ್ಯಾನ್ಸಿ ಮುತ್ತಣ್ಣ, ಹೆಚ್.ಎಸ್. ಪ್ರೇಮ ಕುಮಾರ್, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕೋಶಾಧಿಕಾರಿ ಕೆ.ವಿ. ಉಮೇಶ್ ಇದ್ದರು.