(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜೂ. ೯ : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ,ಮಾನ್ವಿ ವಿಧಾನಪರಿಷತ್ ಕ್ಷೇತ್ರದ ಮಾಜಿ ಸದಸ್ಯ, ಎನ್.ಎಸ್ ಬೋಸರಾಜ್ ಅವರನ್ನು ನೇಮಕ ಮಾಡಲಾಗಿದೆ.

ಎನ್.ಎಸ್ ಬೋಸರಾಜ್ ಅವರ ನೇಮಕ ಬಹುತೇಕರಿಗೆ ಅಚ್ಚರಿಯುಂಟಾಗಿದೆ. ಯಾಕೆಂದರೆ ಕೊಡಗು ಉಸ್ತುವಾರಿ ಸಚಿವರಾಗಿ ಪಿರಿಯಾಪಟ್ಟಣ ಕ್ಷೇತ್ರದ ಶಾಸಕ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಕೊಡಗು ಮೂಲದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅಥವಾ ಇಂಧನ ಇಲಾಖೆ ಸಚಿವ ಕೊಡಗು ಮೂಲದ ಕೆ.ಜೆ. ಜಾರ್ಜ್ ಹೆಗಲಿಗೆ ರಾಜ್ಯ ಸರ್ಕಾರ ನೀಡಬಹುದೆಂದು ಬಹುತೇಕರು ಊಹಿಸಿದ್ದರು.

ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲೆಗೆ ಅಚ್ಚರಿಯ ಆಯ್ಕೆ ನಡೆದಿದೆ.

ಆಸಕ್ತಿ ತೋರದ ಸಚಿವರು!

ಕೊಡಗು ಜಿಲ್ಲೆ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಜಿಲ್ಲೆ.ದೊಡ್ಡ ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕಾಗಿ ಸಚಿವರು ಪೈಪೋಟಿ ನಡೆಸುವುದು ಸಹಜ. ಆದರೆ ಪುಟ್ಟ ಕೊಡಗು ಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ದಿನೇಶ್ ಗುಂಡೂರಾವ್ ಅಥವಾ ಪಿರಿಯಾಪಟ್ಟಣ ಪಟ್ಟಣ ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಅವರಿಗೆ ಕೊಡಗು ಉಸ್ತುವಾರಿ ನೀಡಬಹುದೆಂಬ ಚರ್ಚೆಗಳು ನಡೆದಿದ್ದವು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೊಡಗಿನ ಪಕ್ಕದ ಜಿಲ್ಲೆ ದಕ್ಷಿಣ ಕನ್ನಡ ಹಾಗೂ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡಿಗೆ ಆಪ್ತ ಹಾಗೂ ಪ್ರಭಾವಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ, ಶಾಸಕ ಹಾಗೂ ವಿಧಾನಪರಿಷತ್ ಸದಸ್ಯರಾಗದೆ ಅಚ್ಚರಿಯಾಗಿ ಸಚಿವ ಸ್ಥಾನ ಪಡೆದಿದ್ದ ಎನ್.ಎಸ್ ಬೋಸರಾಜ್, ಕೊಡಗು ಉಸ್ತುವಾರಿಯಾಗಿ ನೇಮಕವಾಗಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಿಂದ ಅಚ್ಚರಿಗೊಳಗಾಗಿದ್ದಾರೆ.

ಮೂಲಗಳ ಪ್ರಕಾರ ರಾಜ್ಯದ ಪ್ರಭಾವಿ ಸಚಿವರುಗಳು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.ಮಳೆಗಾಲ ಹಾಗೂ ಇನ್ನಿತರ ವಿಷಯಗಳ ನೆಪವೊಡ್ಡಿ ಕೊಡಗು ಉಸ್ತುವಾರಿ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು ಎಂದು ಕಾಂಗ್ರೆಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಉಸ್ತುವಾರಿ ಸಚಿವರಿಗೆ ಕಾಂಗ್ರೆಸ್ ಶಾಸಕರ ಭಾಗ್ಯ!..

೨೦೧೩ ರಿಂದ ೨೦೧೮ ವರೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಎಚ್.ಎಸ್. ಮಹದೇವಪ್ಪ, ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಅವರು ಕಾರ್ಯನಿರ್ವಹಿಸಿದ್ದರು.

ಈ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇದ್ದರು.ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಶಾಸಕರೇ ಇರುವುದರಿಂದ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ, ನೀಡಿ ಅಭಿವೃದ್ಧಿ ಕಾರ್ಯನಡೆಸಬಹುದೆಂದು ವಿಶ್ಲೇಷಿಸಲಾಗುತ್ತಿದೆ.