ಕೋವರ್‌ಕೊಲ್ಲಿ ಇಂದ್ರೇಶ್
ರಾಯಚೂರು, ಜೂ. ೧೦: ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬೋಸರಾಜು ಅವರನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ವಿವಿಧ ಸಂಘಟನೆಗಳು ಪಟ್ಟು ಹಿಡಿದಿವೆ. ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಡಾ. ಶರಣಪ್ರಕಾಶ ಪಾಟೀಲ್ ನೇಮಕ ಮಾಡಿರುವುದಕ್ಕೆ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಶನಿವಾರ ದೊಡ್ಡ ಪ್ರತಿಭಟನೆ ನಡೆಸಿದವು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿ, ‘ಬಾಯ್ಕಾಟ್ ಹಾಗೂ ಗೋ ಬ್ಯಾಕ್ ಸಚಿವರೇ’ ಎಂದು ಘೋಷಣೆಗಳನ್ನು ಕೂಗಿದ ಪ್ರಗತಿಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವ ಶರಣ ಪ್ರಕಾಶ್ ಪಾಟೀಲ್ ಭಾವಚಿತ್ರಕ್ಕೆ ಬೆಂಕಿಯನ್ನು ಹಚ್ಚಿ ಪ್ರತಿಭಟಿಸ ಲಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಹಲವು ವರ್ಷಗಳ ನಂತರ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ನೂತನ ರಾಜ್ಯ ಸರ್ಕಾರವು ಸಚಿವ ಸ್ಥಾನವನ್ನು ಕಲ್ಪಿಸಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಾಗಿ ಇಲ್ಲಿನ ಸ್ಥಳೀಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನೀಡಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಪೂರಕ ವಾಗುವುದಿಲ್ಲ, ಜಿಲ್ಲೆಗೆ ಅನ್ಯಾಯ ಮಾಡಿದಂತೆ ಆಗಿದೆ ಎಂದು ಆರೋಪಿಸಿದರು.
ಎನ್.ಎಸ್. ಬೋಸರಾಜು ಅವರಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಕೂಡಲೇ ಅವರನ್ನು ಕೊಡಗಿನಿಂದ ರಾಯಚೂರಿನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಲು ನೂರಾರು ದಿನಗಳಿಂದ ನಿರಂತರವಾದ ಹೋರಾಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಡಾ.ಶರಣಪ್ರಕಾಶ್ ಪಾಟೀಲ್ ಕಲಬುರಗಿ ಜಿಲ್ಲೆಗೆ ಏಮ್ಸ್ ಸ್ಥಾಪಿಸುವುದಾಗಿ ಹೇಳಿಕೆ ನೀಡುವ ಮೂಲಕ ಜಿಲ್ಲೆಗೆ ಅನ್ಯಾಯವೆಸಗಲು ಮುಂದಾಗಿದ್ದಾರೆ.
(ಮೊದಲ ಪುಟದಿಂದ) ಈ ಮೂಲಕ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆದು ಏಮ್ಸ್ ಜಿಲ್ಲೆಗೆ ತಪ್ಪಿಸಬಹುದು ಎಂದು ಪ್ರತಿಭಟಿಸಿ ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ರೈತರ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆಯನ್ನು ಗಂಭಿರವಾಗಿ ಪರಿಗಣಿಸಿ ಸಚಿವ ಬೋಸರಾಜು ಅವರಿಗೆ ಸ್ವ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.