ವೀರಾಜಪೇಟೆ, ಜೂ. ೯: ವೀರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ತಪ್ಪಡಕ ಕಟ್ಟುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಣಿ ಮಾಚಯ್ಯ ಅವರನ್ನು ಒಕ್ಕೂಟದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ ಅವರು, ಕೊಡವ ಜನಾಂಗದ ನಾವೆಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊAದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿಯಲ್ಲಿ ಆದಷ್ಟು ಸಮಾಜ ಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥಪೂರ್ಣ ಗೊಳಿಸಬೇಕೆಂದು ಕರೆ ನೀಡಿದರು.
ನನ್ನ ಜೀವನದ ಕೊನೆಯ ಉಸಿರಿರುವ ತನಕ ಜಾನಪದ ಕಲಾ ಪ್ರಕಾರವಾದ ಉಮ್ಮತಾಟ್ ಕಲಾ ಪ್ರಕಾರವನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದು ನುಡಿದರು.
ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಕೇವಲ ಅಡುಗೆ ಮನೆಗಷ್ಟೇ ಸೀಮಿತಗೊಳಿಸದೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು.
ಯುವಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರಿಗಿದೆ. ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವುದು ಪ್ರತಿ ಪೋಷಕರ ಜವಾಬ್ದಾರಿ. ಅವರಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿಸಿಕೊಡು ವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಒಕ್ಕೂಟದ ಸದಸ್ಯೆ ಯರಿಗೆ "ಕೊಡವ ಮದುವೆಯಲ್ಲಿ ಕೊಡವ ಹೆಣ್ಣುಮಕ್ಕಳ ವೇಷ ಭೂಷಣ ಹೇಗೆ ಇದ್ದರೆ ಚೆಂದ" ಎಂಬ ವಿಚಾರದ ಬಗ್ಗೆ ಚರ್ಚಾ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನಾಯಕಂಡ ಬೇಬಿ ಚಿಣ್ಣಪ್ಪ, ದ್ವಿತೀಯ ತಾತಂಡ ಪ್ರಭಾ ನಾಣಯ್ಯ, ತೃತೀಯ ಪೆಮ್ಮಂಡ ಗೀತಾ ಪವಿತ್ರ ಪಡೆದುಕೊಂಡರು.
ಇದೇ ಸಂದರ್ಭ ತಾತಂಡ ಜ್ಯೋತಿ ಪ್ರಕಾಶ್ ಒಕ್ಕೂಟಕ್ಕೆ ನೀಡಿದ ದತ್ತಿನಿಧಿಯನ್ನು ಖಜಾಂಚಿ ತಾತಂಡ ಯಶು ಕಬೀರ್ ಪಡೆದುಕೊಂಡರು.
ಒಕ್ಕೂಟದ ಸದಸ್ಯೆ ಉದ್ದಪಂಡ ವಿಮಲಾ ಪ್ರಾರ್ಥಿಸಿದರು. ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಳಿಯಪ್ಪ ಸ್ವಾಗತಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಹಕಾರ್ಯದರ್ಶಿ ಮಾಳೇಟಿರ ಕವಿತಾ ಶ್ರೀನಿವಾಸ್, ಖಜಾಂಚಿ ತಾತಂಡ ಯಶು ಕಬೀರ್, ಸಲಹಾ ಸಮಿತಿ ಸದಸ್ಯೆ ಬಿದ್ದಂಡ ರಾಣಿ ಉತ್ತಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಎಲ್ಲ ಸದಸ್ಯರು ಹಾಜರಿದ್ದರು.