ಸೋಮವಾರಪೇಟೆ, ಜೂ. ೧೦: ಯುವ ಸಮುದಾಯ ದೇಶದ ನಿಜವಾದ ಸಂಪತ್ತಾಗಿದ್ದು, ಗ್ರಾಮೀಣಾ ಭಿವೃದ್ಧಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಶಾಸಕ ಡಾ. ಮಂಥರ್‌ಗೌಡ ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮಂಥರ್‌ಗೌಡರಿಗೆ ಗೌಡಳ್ಳಿ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು ಅಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡಿದರೆ ಸಾಕು. ಪಕ್ಷಾತೀತವಾಗಿ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು ಎಂದು ಸಲಹೆ ನೀಡಿದರು. ಈಗ ಕಾಂಗ್ರೆಸ್ ಗೆದ್ದಾಗಿದೆ. ಇನ್ನು ಇತರ ಪಕ್ಷಗಳ ಕಾರ್ಯಕರ್ತರ ಮನಸ್ಸನ್ನು ಗೆಲ್ಲಬೇಕು ಎಂದು ಹೇಳಿದರು.

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಗಣನೀಯ ಸಾಧನೆ ತೋರಿಸಲೇಬೇಕು. ರಾಜ್ಯ ಸರ್ಕಾರ ಆಡಳಿತ ಕಾಂಗ್ರೆಸ್ ಕೈಯಲ್ಲಿದ್ದು, ಹೆಚ್ಚಿನ ಅಭಿವೃದ್ಧಿಗೆ ಅನುದಾನ ತರಬಹುದು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪಕ್ಷದ ಪ್ರಮುಖರಾದ ಕೆ.ಎಂ. ಲೋಕೇಶ್ ಕುಮಾರ್, ಬಿ.ಈ. ಜಯೇಂದ್ರ, ಎಚ್.ಆರ್. ಸುರೇಶ್, ಬಿಂದು, ಕುಸುಮಾ ಅಶ್ವಥ್, ಸಿ.ಈ. ವೆಂಕಟೇಶ್, ಶಶಿಕುಮಾರ್, ಬಿ.ಪಿ. ಮೊಗಪ್ಪ, ಶಾಂತ್ವೇರಿ ವಸಂತ್, ಗೌಡಳ್ಳಿ ಮಹೇಶ್, ರೈತ ಮುಖಂಡ ಜಿ.ಎಂ. ಹೂವಯ್ಯ, ಕೂಗೂರು ನಾಗರಾಜ್ ಕೆ.ಎ. ಆದಂ ಮತ್ತಿತರರು ಇದ್ದರು.