ವೀರಾಜಪೇಟೆ, ಜೂ. ೯: ತಡ ರಾತ್ರಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಈರ್ವರನ್ನು ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ಅಭಿ (೨೧) ಕೂಲಿ ಕಾರ್ಮಿಕ, ವೀರಾಜಪೇಟೆ ನಗರದ ಸುಣ್ಣದ ಬೀದಿ ನಿವಾಸಿ ಸೂರ್ಯ (೨೧) ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಬಂಧನವಾದ ಯುವಕರು.
ವೀರಾಜಪೇಟೆ ನಗರದ ಮಾರಿಯಮ್ಮ ದೇಗುಲದ ಸಮೀಪದ ತಂಗುದಾಣದಲ್ಲಿ (ದಖ್ಖನಿ ಮೊಹಲ್ಲಾ ಜಂಕ್ಷನ್) ಈರ್ವರು ಯುವಕರು ತಾ.೮ರಂದು ರಾತ್ರಿ ೧.೨೦ ರ ವೇಳೆಯಲ್ಲಿ ಅನುಮಾನಸ್ಪದ ವಾಗಿ ಕುಳಿತುಕೊಂಡಿದ್ದರು. ಪೊಲೀಸ್ ಠಾಣೆಗೆ ಬಂದ ಮಾಹಿತಿ ಅನ್ವಯ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರ ಮೇಲೆ ಧಾಳಿ ನಡೆಸಿದಾಗ ಅವರ ಬಳಿ ಕೈಚೀಲದಲ್ಲಿರಿಸಲಾಗಿದ್ದ ೨೯೪ ಗ್ರಾಂ ಹಸಿ ಗಾಂಜಾ, ರೂ. ೨೦೦೦ ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಯುವಕರನ್ನು ತನಿಖೆಗೆ ಒಳಪಡಿಸಿದ ಸಂದರ್ಭ ತಮ್ಮ ಬಳಿ ಇದ್ದ ಗಾಂಜಾವನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುವ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಬಂಧಿತರ ಮೇಲೆ ನಗರ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಎನ್.ಡಿ.ಪಿ.ಎಸ್ ಅನ್ವಯ ಪ್ರಕರಣ ದಾಖಲಿಸಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕÀ ಶಿವರುದ್ರ ನಿರ್ದೇಶನದಲ್ಲಿ ನಗರ ಠಾಣೆಯ ಪಿಎಸ್ಐ ಶ್ರೀಧರ್, ಸಿಬ್ಬಂದಿಗಳಾದ ಖಾದರ್, ಸತೀಶ್, ಧರ್ಮ ಮತ್ತು ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
-ಕಿಶೋರ್ ಕುಮಾರ್ಶೆಟ್ಟಿ