ಹೆಬ್ಬಾಲೆ, ಜೂ. ೮: ಹೆಬ್ಬಾಲೆ ಗ್ರಾಮದಲ್ಲಿ ಬುಧವಾರ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂಥರ್ ಗೌಡ ಅವರು ಮಾತನಾಡಿ, ಪ್ರತಿಯೊಬ್ಬರು ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು. ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ಆದ್ದರಿಂದ ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು. ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಆರ್. ದೊಡ್ಡರಾಜ್ ಮಾತನಾಡಿ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ಬಣ್ಣಿಸಿದರು. ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.

ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತಿ ಪ್ರಾಧ್ಯಾಪಕ ಡಾ. ಹೆಚ್.ಎಲ್. ವೆಂಕಟೇಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಮೀನಾಕುಮಾರಿ, ಮುಖಂಡರಾದ ಮಂಜುನಾಥ್ ಗುಂಡೂರಾವ್, ಹೆಚ್.ಕೆ. ನಟೇಶ್ ಗೌಡ, ಹೆಚ್.ಟಿ. ದಿನೇಶ್, ಎಸ್.ಎಸ್. ಚಂದ್ರಶೇಖರ್, ಟಿ.ಬಿ. ಜಗದೀಶ್, ದಸಂಸ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಉಪನ್ಯಾಸಕ ಮೆ.ನಾ. ವೆಂಕಟನಾಯಕ್ ಉಪಸ್ಥಿತರಿದ್ದರು.

ಮೆರವಣಿಗೆ : ಅಲಂಕೃತ ವಾಹನ ದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯ ಗೋಷ್ಠಿಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು.