ಮಡಿಕೇರಿ, ಜೂ. ೯: ಮಳೆಗಾಲದಲ್ಲಿ ಎದುರಾಗಬಹುದಾದ ವೈಪರೀತ್ಯಗಳನ್ನು ಎದುರಿಸಲು ತಕ್ಷಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ಶಾಸಕ ಡಾ. ಮಂಥರ್ ಗೌಡ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಿತು.
ಜಿಲ್ಲಾ ಪಂಚಾಯತ್ ಕಟ್ಟಡದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಜನರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿ ಎಂದು ಶಾಸಕರು ಕಿವಿಮಾತು ಹೇಳಿದರು.
ಕೊಡಗಿನಲ್ಲಿ ಭತ್ತದ ಕೃಷಿ ಅವಸಾನದತ್ತ ಸಾಗುತ್ತಿರುವ ಗಂಭೀರ ವಿಚಾರದ ಬಗ್ಗೆ ಶಾಸಕರು ಕೃಷಿ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃಷಿ ಅಧಿಕಾರಿ, ಬಹುತೇಕ ರೈತರು ಭತ್ತವನ್ನೇ ಕೈಬಿಟ್ಟಿದ್ದು ಬೇರೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವಿಜ್ಞಾನಿಗಳೇ ಪರಿಹಾರ ಸೂಚಿಸಬೇಕೆಂದರು.
ಈ ವೇಳೆ ಡಾ. ಮಂಥರ್, ಭತ್ತದ ಜೊತೆಗೆ ಮೀನುಗಾರಿಕೆಯನ್ನು ಪರ್ಯಾಯವಾಗಿ ಮಾಡಿ ಉತ್ತಮ ಆದಾಯ ಗಳಿಸಬಹುದು. ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ತಲಾ ೫ ಎಕರೆ ಭೂಮಿಯಲ್ಲಿ ಮೊದಲು ಪ್ರಾಯೋಗಿಕವಾಗಿ ಮಾಡಿ ನೋಡೋಣ ಎಂದರು. ಈ ಬಗ್ಗೆ ಸವಿಸ್ತಾರ ವರದಿಯೊಂದನ್ನು ಸಿದ್ಧಪಡಿಸುವಂತೆ ಮಂಥರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆ ಮುನ್ನೆಚ್ಚರಿಕೆ ಕಾಮಗಾರಿಗಳನ್ನು ನಿರ್ವಹಿಸಲು ಗ್ರಾಮ ಪಂಚಾಯ್ತಿಗಳಿಗೆ ತಲಾ ೫೦ ಸಾವಿರ ಹಣವನ್ನು ಇನ್ನೆರಡು ದಿನಗಳಲ್ಲಿ ಜಮಾ ಮಾಡುವುದಾಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶೇಖರ್ ತಿಳಿಸಿದರು.
೨ನೇ ಮೊಣ್ಣಂಗೇರಿ, ಸಂಪಾಜೆ ಮತ್ತಿತರ ಭಾಗಗಳಲ್ಲಿ ಚರಂಡಿ, ಕೊಲ್ಲಿಗಳ ನಿರ್ವಹಣೆ, ರಸ್ತೆ ಬದಿ ಕಾಡು ಕಡಿಯುವ ಕೆಲಸ ತುರ್ತಾಗಿ ಆಗಬೇಕಿದ್ದು, ಇದರೊಂದಿಗೆ ಸ್ಥಳ ಪರಿಶೀಲಿಸಿ ಎಂದು ಮಂಥರ್ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆಗಳ ಗುಂಡಿ ಮುಚ್ಚಿ ವಾರದೊಳಗೆ ವರದಿ ನೀಡುವಂತೆ ಅವರು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದರು.
(ಮೊದಲ ಪುಟದಿಂದ) `ಇದು ನಮ್ಮದಲ್ಲ, ನಿಮ್ಮದಲ್ಲ’ ಎನ್ನುವ ನೆಪ ಬಿಟ್ಟು ಸಮನ್ವಯತೆಯಿಂದ ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಫೋನ್ ಸ್ವಿಚಾಫ್ ಮಾಡಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು. ವಿಶೇಷ ಅನುದಾನ ಬೇಕೆಂದು ಅಧಿಕಾರಿಗಳು ಕೇಳಿದಾಗ, ಕಳೆದ ಬಾರಿ ಸ್ಪೆಷಲ್ ಗ್ರಾಂಟ್ ತಂದು, ಗುತ್ತಿಗೆದಾರರಿಗೆ ಹಣ ಪಾವತಿಸಿಲ್ಲ. ಹೀಗಾದರೆ ಗುತ್ತಿಗೆದಾರರು ಕೆಲಸಕ್ಕೆ ಒಪ್ಪುತ್ತಾರೆಯೇ ಎಂದು ಶಾಸಕರು ಮರು ಪ್ರಶ್ನಿಸಿದರು.
ಶಾಲೆಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದರೆ ವಾಟರ್ ಫಿಲ್ಟರ್‌ಗಳನ್ನು ಖರೀದಿಸಿ ಎಂದು ಸಲಹೆ ನೀಡಿದರು.
ಸಿಬ್ಬಂದಿ ಕೊರತೆಯಿಂದ ಸಮಸ್ಯೆಯಾಗುತ್ತಿರವ ಬಗ್ಗೆ ಸೆಸ್ಕ್ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಈ ವೇಳೆ ಶಾಸಕರು, ಯಾರೇ ವರ್ಗಾವಣೆಯಾದರು ಸದ್ಯಕ್ಕೆ ‘ರಿಲೀವ್’ ಮಾಡಬೇಡಿ ಎಂದು ಸೂಚನೆ ನೀಡಿದರು. ಈ ಅವಧಿಯಲ್ಲಿ ಅಧಿಕಾರಿ, ಸಿಬ್ಬಂದಿಗಳು ವರ್ಗಾವಣೆಯಾಗುತ್ತಿರುವ ಬಗ್ಗೆ ಪ್ರತ್ಯೇಕ ಸಭೆ ಮಾಡಿ ತೀರ್ಮಾನಿಸಲಾಗುವುದು ಎಂದ ಶಾಸಕರು, ಪಿಡಿಓಗಳು, ಸ್ಟ್ಟಾಫ್ ನರ್ಸ್, ತಾಂತ್ರಿಕ ಸಿಬ್ಬಂದಿಗಳ ಕೊರತೆಯಿದ್ದರೆ ಮನವಿ ಸಲ್ಲಿಸುವಂತೆ ಸೂಚಿಸಿದರು.
ಮಡಿಕೇರಿಯ ರಾಜಕಾಲುವೆಯ ಹೂಳೆತ್ತಲಾಗಿದೆ, ಒತ್ತುವರಿಯಾಗಿಲ್ಲ ಎಂದು ನಗರಸಭಾ ಕಂದಾಯಾಧಿಕಾರಿ ತಾಹಿರ್ ಮಾಹಿತಿ ನೀಡಿದರು. ಕೆಲವೆಡೆ ಅವ್ಯವಸ್ಥೆಯಿದ್ದು ನಾನೇ ಖುದ್ದು ನೋಡುತ್ತೇನೆ ಅಥವಾ ನೀವೇ ಹೊಣೆಹೊತ್ತು ವ್ಯವಸ್ಥೆ ಮಾಡಿ ಎಂದು ನಿರ್ದೇಶಿಸಿದರು.
ಆರ್ಮಿ ಕ್ಯಾಂಟೀನ್ ಎದುರಿನಲ್ಲಿ ಅಪಾಯಕಾರಿ ಬರೆಯಿದ್ದು, ರಾಜಕಾಲುವೆಗೆ ತೊಂದರೆಯಿದೆ ಎಂದು ತಾಹೀರ್ ಗಮನ ಸೆಳೆದಾಗ, `ಈ ಬಗ್ಗೆ ವರದಿ ಕೇಳಿದರೂ ನಗರಸಭೆ ನೀಡಿಲ್ಲ. ನಾನು ಸಿಗದೇ ಇದ್ದರೆ ಸಮಸ್ಯೆ ಹೇಳಿಕೊಳ್ಳಲ್ಲ’ ಎಂದು ಶಾಸಕರು ಕೋಪಗೊಂಡರು. ಸಾಧ್ಯವಾದರೆ ಎನ್‌ಡಿಆರ್‌ಎಫ್ ನಿಧಿಯಲ್ಲಿ ತಡೆಗೋಡೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಸಭೆಯಲ್ಲಿದ್ದ ಎನ್.ಡಿ.ಆರ್.ಎಫ್. ಅಧಿಕಾರಿ ಶಾಂತಿಲಾಲ್ ಜಟಿಯಾ ಅವರನ್ನು ಪುಷ್ಪಗುಚ್ಛ ನೀಡಿ ಶಾಸಕರು ಅಭಿನಂದಿಸಿದರು. ಯೋಧರ ಬೇಕು ಬೇಡಿಕೆಗಳ ಬಗ್ಗೆ ಆದ್ಯ ಗಮನ ಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ತಹಶೀಲ್ದಾರ್ ಕಿರಣ್ ನರಗುಂದ್ ಉಪಸ್ಥಿತರಿದ್ದರು.