ಮಡಿಕೇರಿ, ಜೂ. ೯: ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ (ಶಾಲಾ - ಕಾಲೇಜು ವಿದ್ಯಾರ್ಥಿನಿಯರು ಮತ್ತು ತೃತೀಯ ಲಿಂಗಿಗಳು) ಒಳಗೊಂಡಿರುವAತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಬಸ್‌ಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಶಕ್ತಿ ಯೋಜನೆಯಡಿ ರೂಪಿಸಿದೆ.

ಈ ಯೋಜನೆಯನ್ನು ಮುಖ್ಯಮಂತ್ರಿಯವರು ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ವಿಧಾನಸೌಧ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಜಿಲ್ಲೆ, ತಾಲೂಕುಗಳಲ್ಲಿ ಲೋಕಾರ್ಪಣೆಗೊಳಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ (ಬಿ.ಸಿ. ರೋಡು), ಸುಳ್ಯ, ಬೆಳ್ತಂಗಡಿ ಬಸ್ ನಿಲ್ದಾಣಗಳಲ್ಲಿ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಬಸ್ ನಿಲ್ದಾಣಗಳಲ್ಲಿ ಮಧ್ಯಾಹ್ನ ೧೨.೩೦ ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಜಿಲ್ಲಾಮಟ್ಟದಲ್ಲಿ ಜರುಗುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳು ಭಾಗವಹಿಸುವರು. ತಾಲೂಕು ಮಟ್ಟದಲ್ಲಿ ಜರಗುವ ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು ಮತ್ತು ಸರ್ಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಜಯಕರಶೆಟ್ಟಿ ತಿಳಿಸಿದ್ದಾರೆ.