ಮಡಿಕೇರಿ, ಜೂ. ೯: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ ನೇರವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡು ಸರಕಾರದಲ್ಲಿ ಸಣ್ಣ ನೀರಾವರಿ, ಗಣಿಗಾರಿಕೆ, ವಿಜ್ಞಾನ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಬೋಸರಾಜು ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಹಾಗೂ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿರುವ ಬೋಸರಾಜು ಅವರು ಮಾನ್ವಿ ಮತಕ್ಷೇತ್ರದಲ್ಲಿ ಗೆಲುವು ದಾಖಲಿಸಿ ೩ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಇದಲ್ಲದೆ ರಾಯಚೂರು ಜಿಲ್ಲಾ ಕಾಂಗ್ರೆಸ್‌ನ ಮೊದಲ ಅಧ್ಯಕ್ಷರಾಗಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ, ತುಂಗಭದ್ರಾ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಳಿಕ ವಿಧಾನ ಪರಿಷತ್ತು ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ವರಿಷ್ಠ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಬೋಸರಾಜು, ಈ ಬಾರಿ ಎಲ್ಲಿಯೂ ಚುನಾವಣೆಗೆ ಸ್ಪರ್ಧೆ ಮಾಡದೆ ನೇರವಾಗಿ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ತಾ. ೩೦ ರಂದು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ೩ ಸ್ಥಾನಗಳ ಚುನಾವಣೆಯಲ್ಲಿ ಇವರಿಗೆ ಒಂದು ಸ್ಥಾನ ಖಚಿತವಾಗಿದೆ.
ಈ ಸಂಬAಧ ‘ಶಕ್ತಿ’ಯೊಂದಿಗೆ ಮಾತನಾಡಿದ ನೂತನ ಸಚಿವರು, ಕಾವೇರಿ ಉಗಮ ಸ್ಥಾನ, ಕ್ರೀಡೆಯ ತವರು, ಸೇನಾನಿಗಳ ಬೀಡು, ಪ್ರವಾಸಿಗರ ಸ್ವರ್ಗ ಕೊಡಗಿನಲ್ಲಿ ಸೇವೆ ಮಾಡುವುದು ತನಗೆ ಸಂದ ಸೌಭಾಗ್ಯವಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಕೊಡಗು ಭಿನ್ನವಾಗಿದೆ. ಜಿಲ್ಲೆಯ ಜನ ಸುಸಂಸ್ಕೃತರು ಎಂದು ತನಗೆ ತಿಳಿದಿದೆ. ಕೊಡಗಿನ ಮೇಲೆ ತನಗೆ ಅಪಾರ ಗೌರವವಿದೆ.
(ಮೊದಲ ಪುಟದಿಂದ) ಜಿಲ್ಲೆಯ ಭಾವನಗೆ ಧಕ್ಕೆ ಬಾರದಂತೆ ತಾನು ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೂಕ್ಷö್ಮ ಜಿಲ್ಲೆಯಾಗಿರುವ ಕೊಡಗಿನ ಹಿತ ಕಾಯಲು ಬದ್ಧನಾಗಿದ್ದೇನೆ. ಜನರ ಬೇಕು-ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗೆ ಸ್ಪಂದಿಸುವ ಕೆಲಸ ನನ್ನಿಂದ ಆಗುತ್ತದೆ. ಸದ್ಯದಲ್ಲಿಯೇ ಕೊಡಗಿಗೆ ಬಂದು ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.
ಮಳೆಗಾಲ ಸಮೀಪಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಭಯವಿದೆ. ಈ ಸಂಬAಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವನ್ನು ತ್ವರಿತಗತಿಯಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.