ಕಣಿವೆ, ಜೂ. ೯: ಈ ವರ್ಷದ ಜನವರಿಯಿಂದ ಬಹುತೇಕ ಮೇ ತಿಂಗಳ ಅರ್ಧದವರೆಗೂ ಮಳೆ ಯಾಗಲೇ ಇಲ್ಲ. ಹಾಗಾಗಿ ಕಾಡಿನಲ್ಲಿದ್ದ ಸಸ್ಯಗಳು ಹಾಗೂ ಗಿಡಗಳು ತೇವಾಂಶದ ಕೊರತೆಯಿಂದ ಒಣಗುವ ಹಂತ ತಲುಪಿದ್ದವು. ಹಾಗೆಯೇ ಮರಗಳೆಲ್ಲಾ ಎಲೆಗಳನ್ನುದುರಿಸಿ ಒಣಗುತ್ತಿರುವಂತೆ ಭಾಸವಾಗುತ್ತಿತ್ತು.

ಇನ್ನು ಅರಣ್ಯದೊಳಗಿನ ಕೆರೆ ಕಟ್ಟೆಗಳಲ್ಲಿ ಕುಡಿಯುವ ನೀರು ಕೂಡ ಇಂಗಿ ಹೋಗುವ ಹಂತ ತಲುಪಿದ್ದವು.

ಆದರೆ ಈಗ ಸನ್ನಿವೇಶ ಬದಲಾಗಿದೆ. ಮೇ ತಿಂಗಳ ಕೊನೆಯಲ್ಲಿ ಉತ್ತಮ ಮಳೆ ಸುರಿದು ಅರಣ್ಯದಲ್ಲಿನ ಸಸ್ಯ ರಾಶಿಗಳು ಹಸಿರಿನಿಂದ ನಳ ನಳಿಸುತ್ತಿವೆ. ಇದರಿಂದ ಕಾಡಾನೆಗಳಿಗೆ ಒಂದಷ್ಟು ಆಹಾರ ಸಿಗುತ್ತಿದೆ ಎಂದು ಭಾವಿಸಬಹುದೇನೋ...

ಆದರೆ ಕಾಡಿನಲ್ಲಿ ಆಹಾರದ ಗಿಡ ಮರಗಳು ಇಲ್ಲದಂತಹ ಸನ್ನಿವೇಶದಲ್ಲಿ ಕಾಡಿನಲ್ಲಿನ ಕಾಡಾನೆಗಳು ಆಹಾರಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ಅದೆಷ್ಟು ಪರಿತಪಿಸಿದವೋ ಏನೋ....!

ಇದಕ್ಕೆ ನಿದರ್ಶನವೆಂಬAತೆ ಆನೆಚೌಕೂರು ಅರಣ್ಯದ ಹೆದ್ದಾರಿ ಬದಿಯಲ್ಲಿನ ಕೆರೆಯಂಗಳದಲ್ಲಿ ಎದುರಾದ ಬಡಕಲು ದೇಹದ ತಾಯಿ ಕಾಡಾನೆಯೊಂದು ತನ್ನ ಮರಿಯೊಂದಿಗೆ ಸಂಕಟದಲ್ಲಿ ಹೆಜ್ಜೆ ಇಡುತ್ತಾ ಸಾಗಿ ಬಂದು ನೀರು ಕುಡಿಯುತ್ತಿತ್ತು.

ಸಾಮಾನ್ಯವಾಗಿ ಕಾಡಾನೆಗಳು ತನಗೆ ಸಿಕ್ಕ ಸೊಪ್ಪು, ಸೆದೆ, ಮರಗಳ ತೊಗಟೆಗಳನ್ನು ತಿಂದು ದಷ್ಟ ಪುಷ್ಟವಾಗಿರುತ್ತವೆ. ಆದರೆ ಈ ತಾಯಿಯಾನೆ ಮಾತ್ರ ವಿಭಿನ್ನವಾಗಿ ಗೋಚರಿಸಿತು.

ಈ ತಾಯಿಯಾನೆ ಹಾಗೂ ಮುದ್ದಾದ ಪುಟ್ಟ ಮರಿಯನ್ನು ಕಂಡ ಒಂದು ಕ್ಷಣ ಅಯ್ಯೋ ಪಾಪ ಎಂಬ ಭಾವ ನೋಡುಗರಲ್ಲಿ ಮೂಡಿತ್ತು. ಏನಾದರೂ ಅನಾರೋಗ್ಯಕ್ಕೆ ತುತ್ತಾಗಿ ಈ ರೀತಿ ಸೊರಗಿ ಹೋಗಿದೆಯೋ ಏನೋ ಅನಿಸಿತು.

ಒಂದು ವೇಳೆ ಈ ಆನೆ ಸೌಖ್ಯವಾಗಿದ್ದಲ್ಲಿ ತನ್ನ ಕೂಸಿನೊಂದಿಗೆ ಅರಣ್ಯದಂಚಿನ ಕೃಷಿಕರ ಜಮೀನಿಗಾದರೂ ತೆರಳಿ ಏನಾದರೂ ತಿಂದು ಬರುತ್ತಿತ್ತೋ ಏನೋ...?

ಆದರೆ ನಾಡಿನಲ್ಲಿನ ಮೃಗೀಯ ವರ್ತನೆಯ ಮನುಷ್ಯರ ಸ್ವಭಾವದಿಂದ ಹೌಹಾರಿಯೋ ಏನೋ ಏನೂ ಆಹಾರವೇ ಸಿಗದ ಕಾಡಿನಲ್ಲೇ ಉಳಿದು ಈ ರೀತಿ ಸೊರಗಿ ಹೋಗಿರಬಹುದಾದ ಸಂಭವವೂ ಇರಬಹುದು.

ಆದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ವೈದ್ಯರೊಂದಿಗೆ ತೆರಳಿ ಈ ತಾಯಿ ಆನೆಯನ್ನು ಪತ್ತೆ ಹಚ್ಚಿ ಏನಾದರೂ ಚಿಕಿತ್ಸೆ ನೀಡುವಲ್ಲಿ ಪ್ರಯತ್ನ ನಡೆಸಬೇಕಿದೆ.

-ಕೆ.ಎಸ್. ಮೂರ್ತಿ