ಮಡಿಕೇರಿ, ಜೂ. ೮: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಪ್ರಯುಕ್ತ ಕೊಡವಾಮೆ ಸಂಘಟನೆ ಆಶ್ರಯದಲ್ಲಿ ಜೂ.೧೦ ರಂದು ಮಡಿಕೇರಿಯಲ್ಲಿರುವ ಪತ್ರಿಕಾ ಭವನದಲ್ಲಿ ಕೊಡವ ಸಂಸ್ಕೃತಿ ವಿಚಾರಗೋಷ್ಠಿ ಆಯೋಜಿಸಲಾಗಿದೆ.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಕೊಡವಾಮೆ ಸಂಘಟನೆ, ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮರ್‌ಂದ್ ಮರೆಯಾನ ಕೊಡವ ನಡ್‌ಪ್ ತೊಡ್‌ಪ್ ವಿಚಾರದ ಕುರಿತು ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ವಿಷಯ ಮಂಡಿಸಲಿದ್ದಾರೆ. ಮಾಳೇಟಿರ ಸೀತಮ್ಮ ವಿವೇಕ್ ಬರೆದಿರುವ ಭಾವ ಕುಸುಮ ಕವನ ಸಂಕಲನ ಲೋಕಾರ್ಪಣೆ ಮಾಡಲಾಗುತ್ತದೆ. ಮಧ್ಯಾಹ್ನ ಮೇಲೆ ನಡೆಯುವ ವಿಚಾರಗೋಷ್ಠಿಯಲ್ಲಿ ಲೋಕ ಮೆಚ್ಚ್ನ ಕೊಡವ ಸಂಸ್ಕೃತಿ ವಿಷಯದ ಕುರಿತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ವಿಚಾರ ಮಂಡಿಸಲಿದ್ದಾರೆ. ೧ ಗಂಟೆ ಅವಧಿಗೆ ವಿಚಾರ ಮಂಡಿಸಲಿದ್ದು, ತದನಂತರ ಆ ವಿಷಯದ ಕುರಿತು ಅರ್ಧ ಗಂಟೆ ಚರ್ಚೆ ನಡೆಯಲಿದೆ.