ಮಡಿಕೇರಿ, ಜೂ. ೮: ಕೊಡಗಿನ ಪ್ರಮುಖ ಪ್ರವಾಸಿ ತಾಣವಾಗಿ ದೇಶದಾದ್ಯಂತ ಗಮನ ಸೆಳೆಯುತ್ತಿರುವ ಮಡಿಕೇರಿಯ ರಾಜಾಸೀಟ್ ಉದ್ಯಾನವನ ಇತ್ತೀಚಿನ ಕೆಲ ವರ್ಷಗಳಿಂದ ವ್ಯಾಪಾರಿಗಳ ಸೋಗಿನಲ್ಲಿರುವ ಕೆಲ ಪುಂಡರಿAದ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಸ್ಥಳೀಯರು ಸೇರಿದಂತೆ ಪ್ರವಾಸಿಗರು ಭಯದ ವಾತಾವರಣದಲ್ಲಿ ರಾಜಾಸೀಟ್‌ನ ಸೌಂದರ್ಯವನ್ನು ಸವಿಯುವಂತ ಸ್ಥಿತಿ ಎದುರಾಗಿದೆ ಎಂದು ನಗರಸಭಾ ಸದಸ್ಯ ಮಹೇಶ್ ಜೈನಿ ತಿಳಿಸಿದ್ದಾರೆ. ರಾಜಾಸೀಟ್‌ನ ಕಾವಲುಗಾರನನ್ನು ಮನಬಂದAತೆ ತಳಿಸಿರುವ ಜಂಶಾದ್ ಮತ್ತು ಈತನ ಸಹಚರರು ಈ ಹಿಂದೆ ಕೂಡ ಮಡಿಕೇರಿ ನಗರಸಭೆಯ ಮಹಿಳಾ ಸದಸ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆಗೆ ಮುಂದಾಗಿದ್ದರು.

ಜಿಲ್ಲಾಧಿಕಾರಿಗಳು ರಾಜಾಸೀಟ್ ಆವರಣವನ್ನು ಅಭಿವೃದ್ಧಿಗೊಳಿಸಿ ಟೆಂಡರ್ ಮೂಲಕ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದಾಗಿ ಹೇಳಿಕೆ ನೀಡಿರುವುದನ್ನು ಸ್ವಾಗತಿಸಿರುವ ಜೈನಿ ಈ ಪ್ರಕ್ರಿಯೆ ನಡೆಸುವಾಗ ಕಳೆದ ಅನೇಕ ವರ್ಷಗಳಿಂದ ರಾಜಾಸೀಟ್ ಆವರಣದಲ್ಲಿ ಸನ್ನಡತೆಯೊಂದಿಗೆ ವ್ಯಾಪಾರ ಮಾಡುತ್ತಿರುವ ಸ್ಥಳೀಯ ವ್ಯಾಪಾರಿಗಳನ್ನು ಮೊದಲು ಗಣನೆಗೆ ತೆಗೆದುಕೊಂಡು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಲ್ಲದೆ ತಾವು ಮಾರಾಟ ಮಾಡುವ ಆಹಾರ ಪದಾರ್ಥಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವವರ ಬಗ್ಗೆ ಮತ್ತು ಪದಾರ್ಥಗಳ ಗುಣಮಟ್ಟ ಮತ್ತು ಶುಚಿತ್ವದ ಬಗ್ಗೆ ಕೂಡ ಗಮನ ಹರಿಸುವಂತಾಗಲಿ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.