ಮಡಿಕೇರಿ, ಜೂ. ೬: ಇಲ್ಲಿನ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಛದ್ಮವೇಶ ಸ್ಪರ್ಧೆ ನಡೆಯಿತು.

ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ರಜಾ ದಿನಗಳಲ್ಲಿ ಮಕ್ಕಳು ಕಾಲಹರಣ ಮಾಡುವ ದಕ್ಕಿಂತ ಇಂತಹ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಪಠ್ಯೇತರ ಚಟುವಟಿಕೆ ಗಳಲ್ಲೂ ತಲ್ಲೀನರಾಗಬೇಕು. ಇದು ಮುಂದಕ್ಕೆ ಸಮಾಜದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಪೋಷಕರು ಕೂಡ ಮಕ್ಕಳ ಆಸಕ್ತಿಗೆ ತಕ್ಕ ಹಾಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಛದ್ಮವೇಶ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದವರೆಲ್ಲರಿಗೂ ಪ್ರಶಂಸನಾ ಪತ್ರ, ಪಾರಿತೋಷಕ ನೀಡಲಾಯಿತು. ತೀರ್ಪುಗಾರರಾಗಿ ಕುಡೆಕಲ್ ಸವಿತಾ ಸಂತೋಷ್ ಹಾಗೂ ಕಿಂಗ್ಸ್ ಆಫ್ ಕೂರ್ಗ್ನ ನೃತ್ಯ ತರಬೇತುದಾರ ಕಿರಣ್ ಕಾರ್ಯನಿರ್ವಹಿಸಿದರು. ಕಿಂಗ್ಸ್ನ ನೃತ್ಯ ಸಂಯೋಜಕ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.