ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೬: ಕಾಡಾನೆಗಳ ಆವಾಸ ಸ್ಥಾನವಾಗಿರುವ ಕೊಡಗು ಜಿಲ್ಲೆಯಲ್ಲಿ ಆನೆಗಣತಿ ಕಾರ್ಯ ೩ ಹಂತದಲ್ಲಿ ೩ ದಿನಗಳ ಕಾಲ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು ೧,೧೦೩ ಆನೆಗಳು ಅರಣ್ಯ ಇಲಾಖೆಯ ಕಣ್ಣಿಗೆ ಬಿದ್ದಿವೆ.

ವನ್ಯಜೀವಿ-ಮಾನವ ಸಂಘರ್ಷದಿAದ ಕಂಗೆಟ್ಟಿರುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಕಳೆದ ಬಾರಿಗಿಂತ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದ್ದು, ಕಳೆದ ಬಾರಿಯ ಅಧಿಕೃತ ಅಂಕಿ ಅಂಶದ ವಿವರ ಅರಣ್ಯ ಇಲಾಖೆ ನೀಡಿಲ್ಲ.

ಆರು ವರ್ಷಗಳ ಅಂತರದ ನಂತರ, ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಮೂರು ದಿನಗಳ ಆನೆ ಗಣತಿ ನಡೆದಿದ್ದು, ಜಿಲ್ಲೆಯಲ್ಲಿನ ೪ ವಿಭಾಗಗಳಾದ ಮಡಿಕೇರಿ, ವೀರಾಜಪೇಟೆ, ಮಡಿಕೇರಿ ವನ್ಯಜೀವಿ ವಿಭಾಗ, ನಾಗರಹೊಳೆ ಹುಲಿ ಸಂರಕ್ಷಿತಾ ಅರಣ್ಯ ವ್ಯಾಪ್ತಿಗಳ ೨೩ ವಲಯಗಳಲ್ಲಿ ಗಣತಿ ನಡೆದಿದೆ. ಇದರಲ್ಲಿ ಸುಮಾರು ೮೦೦ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದರು.

ಹೇಗಾಯಿತು ಗಣತಿ?

ಆನೆ ಗಣತಿ ಕಾರ್ಯವನ್ನು ಮೂರು ಹಂತದಲ್ಲಿ ನಡೆಸಲಾಗಿದೆ, ಮೊದಲ ದಿನ ‘ಬ್ಲಾಕ್ ಕೌಂಟ್' ಮೂಲಕ ನಡೆಸಿ ನೇರವಾಗಿ ಆನೆಗಳ ಸಂಖ್ಯೆಯನ್ನು ದಾಖಲಿಸಿ ಕೊಳ್ಳಲಾಯಿತು. ಎರಡನೇ ದಿನ ಪರೋಕ್ಷ ಗಣತಿ (ಲದ್ದಿ ಮಾದರಿ ಎಣಿಕೆ), ಮೂರನೇ ದಿನ ಕೆರೆ ಕಟ್ಟೆ ಬಳಸಿ ಎಣಿಕೆ ನಡೆಸಲಾಗಿದೆ. ಎಣಿಕೆ ಕಾರ್ಯಗಳಿಗೆ ಅರಣ್ಯ ವ್ಯಾಪ್ತಿಯ ಅರ್ಧದಷ್ಟು ಭಾಗಕ್ಕೆ ಕಾಲ್ನಡಿಗೆಯಲ್ಲಿ ಗಣತಿ ಸಿಬ್ಬಂದಿಗಳು ಸುತ್ತಾಡಿ ಅರಣ್ಯದಲ್ಲಿ ಕಾಣಿಸುವ ಆನೆಯ ಗುರುತುಗಳನ್ನು ನಿಗದಿತ ದಾಖಲೆ ಪ್ರಕಾರ ನಮೂದಿಸಲಾಯಿತು. ಎರಡನೇ ದಿನ

(ಮೊದಲ ಪುಟದಿಂದ) ಪರೋಕ್ಷವಾಗಿ ಆನೆ ಲದ್ದಿ ಸಂಗ್ರಹಿಸಿ ವೈಜ್ಞಾನಿಕವಾಗಿ ದಾಖಲಿಸುವ ಕ್ರಮ ಅನುಸರಿಸಲಾಯಿತು. ಮೂರನೇ ದಿನ ಅರಣ್ಯದೊಳಗಿನ ಕೆರೆ-ಕಟ್ಟೆ, ನೀರಿನ ಹೊಂಡಗಳ ಬಳಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆವರೆಗೆ ಮೊಕ್ಕಾಂ ಹೂಡಿ ಕುಡಿಯುವ ನೀರಿಗಾಗಿ ಬರುವ ಆನೆಗಳ ಗಣತಿ ನಡೆಸಿದ್ದಾರೆ. ಆನೆಗಳ ಗುಂಪಿನಲ್ಲಿ ಎಷ್ಟು ಗಂಡು, ಹೆಣ್ಣು ಹಾಗೂ ಮರಿ ಆನೆಗಳಿದ್ದವು ಎನ್ನುವುದನ್ನು ನೇರ ಹಾಗೂ ಹೆಜ್ಜೆಗಳ ಮೂಲಕ ಪತ್ತೆ ಮಾಡಲಾಗಿದೆ.

ಸವಾಲಿನ ನಡುವೆ ಕೆಲಸ

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸವಾಲಿನ ನಡುವೆ ಕೆಲಸ ನಿರ್ವಹಿಸಿದ್ದಾರೆ.

ಊಟದೊಂದಿಗೆ ಅರಣ್ಯದೊಳಗೆ ಪ್ರವೇಶಿಸುತ್ತಿದ್ದ ಸಿಬ್ಬಂದಿಗಳು ಅರಣ್ಯ ವ್ಯಾಪ್ತಿಯ ಅರ್ಧದಷ್ಟು ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ದುರ್ಗಮ ಹಾದಿ, ಕಡಿದಾದ ಅರಣ್ಯ ಪ್ರದೇಶದಲ್ಲಿ ಸಂಚರಿಸಿ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಿದ್ದಾರೆ. ಆನೆಗಳಿಗಾಗಿ ಕಾದು ಕುಳಿತ್ತಿದ್ದಾರೆ. ಈ ಸಂದರ್ಭ ಆನೆಗಳು ದಾಳಿ ಮಾಡುವ ಭಯವೂ ಸಿಬ್ಬಂದಿಗಳನ್ನು ಕಾಡುತಿತ್ತು.

೩ ಜನರ ೨೦೦ ತಂಡಗಳನ್ನು ಜಿಲ್ಲೆಯಲ್ಲಿ ಮಾಡಲಾಗಿತ್ತು. ಪ್ರತಿ ತಂಡಕ್ಕೂ ಶಸ್ತಾçಸ್ತçಗಳನ್ನು ಮುಂಜಾಗ್ರತ ಕ್ರಮವಾಗಿ ಒದಗಿಸಲಾಗಿತ್ತು ಎಂದು ಮಡಿಕೇರಿ ಡಿಎಫ್‌ಓ ಎ.ಟಿ. ಪೂವಯ್ಯ ತಿಳಿಸಿದ್ದಾರೆ.