ಸೋಮವಾರಪೇಟೆ, ಜೂ. ೬: ಬೀದಿ ನಾಯಿಗಳ ಧಾಳಿಯಿಂದ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಜಿಂಕೆಯು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.

ಸಮೀಪದ ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ನಿನ್ನೆ ದಿನ ಕಂಡು ಬಂದ ಜಿಂಕೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಿಸಿ, ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಜಿಂಕೆಯು ಸಾವನ್ನಪ್ಪಿದೆ.

ಜಿಂಕೆಯ ತಲೆ ಭಾಗದಲ್ಲಿ ಗಾಯವಾಗಿ ಕೊಳೆಯಲಾರಂಭಿಸಿತ್ತು. ಇದರೊಂದಿಗೆ ಹೊಟ್ಟೆಯ ಭಾಗದಲ್ಲೂ ಗಾಯವಾಗಿತ್ತು. ನಿನ್ನೆ ದಿನ ಕಂದಕದೊಳಗೆ ಇದ್ದ ಜಿಂಕೆಯನ್ನು ಸಂಜೆ ವೇಳೆಗೆ ರಕ್ಷಿಸಿ ಚಿಕಿತ್ಸೆಗೆ ಸಾಗಿಸಲಾಗಿತ್ತು.

ಕಾಜೂರು ಭಾಗದಲ್ಲಿ ನಾಲ್ಕೆöÊದು ಬೀದಿ ನಾಯಿಗಳಿದ್ದು, ಅರಣ್ಯದ ಆನೆ ಕಂದಕ ಹಾರಿ ಬರುವ ಜಿಂಕೆಗಳ ಮೇಲೆರಗಿ ಧಾಳಿ ನಡೆಸುತ್ತಲೇ ಇವೆ. ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಕಳೆದ ವಾರವಷ್ಟೇ ಜಿಂಕೆ ಮರಿಯೊಂದರ ಮೇಲೆ ಬೀದಿ ನಾಯಿಗಳು ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕೆಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.