ಜುಲೈ ೩ ರಿಂದ ಬಜೆಟ್ ಅಧಿವೇಶನ : ಜುಲೈ ೭ ರಂದು ಆಯವ್ಯಯ ಮಂಡನೆ : ಸಿದ್ದರಾಮಯ್ಯ

ದಾವಣಗೆರೆ, ಜೂ. ೫: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅಧಿವೇಶನ ಜುಲೈ ೩ ರಿಂದ ಆರಂಭವಾಗಲಿದ್ದು, ೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ನಂತರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸಿ.ಎಂ. ಹೇಳಿದ್ದಾರೆ. ಆದರೆ ಜುಲೈ ೩ ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. ೧ ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಬಳಿಕ ಶುಕ್ರವಾರ ಬಜೆಟ್ ಮಂಡನೆ ಆಗಲಿದೆ ಎಂದರು. ಬಜೆಟ್ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದಾರೆ. ಜುಲೈ ಮೊದಲ ವಾರ ಬಜೆಟ್ ಅಧಿವೇಶನ ಕೈಗೊಳ್ಳಲು ನಿರ್ಧರಿಸಲಾಗಿದ್ದು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬAಧಿಸಿದAತೆ ಚರ್ಚಿಸಿ ಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು. ದಾವಣಗೆರೆಯ ಎಂಬಿಎ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಜೆಟ್ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತದೆ. ಬಜೆಟ್ ಅಧಿವೇಶನವು ಜುಲೈ ೩ ರಿಂದ ಆರಂಭವಾಗಲಿದ್ದು, ಬಜೆಟ್ ಮಂಡನೆಯನ್ನು ಜುಲೈ ೭ ರಂದು ಮಂಡಿಸಲು ವಿವಿಧ ಹಂತದ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಬಳಿಕ ರೈತರಿಗೆ ಬಿತ್ತನೆ ಬೀಜ, ಕೀಟನಾಶಕಗಳ ಪೂರೈಕೆಯಲ್ಲಿ ಲೋಪವಾಗದಂತೆ ಹಾಗೂ ಪ್ರವಾಹದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿದರು. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಗಡಿಯಲ್ಲಿ ಗುಂಡಿನ ದಾಳಿ: ಇಬ್ಬರು ಸಾವು

ಅಸ್ಸಾಂ, ಜೂ. ೫: ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊAಡಿರುವ ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಮತ್ತಿಬ್ಬರು ಗಾಯಗೊಂಡಿದ್ದಾರೆ. ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿನ ಜಮೀನು ವಿವಾದದಿಂದಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಇಬ್ಬರು ಅಸ್ಸಾಂ ಮೂಲದ ಬೋಗಾ ಚುಟಿಯಾ ಮತ್ತು ಮೊನಿತು ಗೊಗೊಯ್ ಎಂದು ಎಸ್ಪಿ ರಂಜನ್ ಭುಯಾನ್ ಹೇಳಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಎರಡು ರಾಜ್ಯಗಳ ೮೦೦ ಕಿಮೀ ಗಡಿಯಲ್ಲಿ ವಿವಾದಗಳನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ವಾರಗಳ ನಂತರ ಈ ಘಟನೆ ನಡೆದಿದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಡೆಪ್ಯೂಟಿ ಕಮಿಷನರ್ ಮತ್ತು ಧೇಮಾಜಿಯ ಎಸ್ಪಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಿಸೋಡಿಯಾಗಿಲ್ಲ ಜಾಮೀನು : ಅನಾರೋಗ್ಯ ಪೀಡಿತ ಪತ್ನಿ ಭೇಟಿಗೆ ಹೈಕೋರ್ಟ್ ಅಸ್ತು

ನವದೆಹಲಿ, ಜೂ. ೫: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಎಎಪಿ ನಾಯಕ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಸಿಸೋಡಿಯಾ ಅವರಿಗೆ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಒಂದು ದಿನದ ಮಟ್ಟಿಗೆ ಭೇಟಿಯಾಗಲು ಅವಕಾಶ ನೀಡಿದ್ದಾರೆ. ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ನೋಡಿಕೊಳ್ಳಲು ಆರು ವಾರಗಳ ಕಾಲ ತಾತ್ಕಾಲಿಕ ಜಾಮೀನು ಕೋರಿ ಸಿಸೋಡಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣ ಸಂಬAಧ ನಿಯಮಿತ ಜಾಮೀನು ಕೋರಿ ಸಿಸೋಡಿಯಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಬಾಕಿ ಇದೆ. ಮಾರ್ಚ್ ೯ ರಂದು ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸೋಡಿಯಾ ಮಧ್ಯಂತರ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ವಿರೋಧಿಸಿತ್ತು.

ರಾಯ್ ಹತ್ಯೆ ಪ್ರಕರಣ: ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

ವಾರಣಾಸಿ, ಜೂ. ೫: ೧೯೯೧ರಲ್ಲಿ ಕಾಂಗ್ರೆಸ್ ನಾಯಕ ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಪ್ರಮುಖ ಆರೋಪಿ ಮುಕ್ತಾರ್ ಅನ್ಸಾರಿಗೆ ವಾರಣಾಸಿಯ ಎಂಪಿ, ಎಂಎಲ್‌ಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಉತ್ತರ ಪ್ರದೇಶದ ವಾರಾಣಸಿಯ ಸಂಸದರ-ಶಾಸಕರ ವಿಶೇಷ ನ್ಯಾಯಾಲಯ, ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ದರೋಡೆಕೋರ-ರಾಜಕಾರಣಿ ಮುಕ್ತಾರ್ ಅನ್ಸಾರಿ ಅಪರಾಧಿ ಎಂದು ಇಂದು ಬೆಳಗ್ಗೆ ತೀರ್ಪು ನೀಡಿತು. ಇಂದು ಮಧ್ಯಾಹ್ನ ೨ ಗಂಟೆಯ ನಂತರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಲಯ, ಮುಕ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ನೀಡಿದೆ ಎಂದು ವಕೀಲ ವಿಕಾಶ್ ಸಿಂಗ್ ತಿಳಿಸಿದ್ದಾರೆ.

ಸಪ್ತಪದಿ ತುಳಿದ ‘ರೆಬೆಲ್ ಸ್ಟಾರ್' ಪುತ್ರ ಅಭಿಷೇಕ್

ಬೆಂಗಳೂರು, ಜೂ. ೫: ಕನ್ನಡದ ರೆಬೆಲ್ ಸ್ಟಾರ್, ರಾಜಕಾರಣಿ ದಿವಂಗತ ಅಂಬರೀಷ್ ಹಾಗೂ ಸಂಸದೆ ನಟಿ ಸುಮಲತಾ ಅವರ ಪುತ್ರ ನಟ ಅಭಿಷೇಕ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್, ಸುಹಾಸಿನಿ ಮಣಿರತ್ನಂ, ಅನಿಲ್ ಕುಂಬ್ಳೆ, ರಾಕಿಂಗ್ ಸ್ಟಾರ್ ಯಶ್ ದಂಪತಿ, ಮೋಹನ್ ಬಾಬು, ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ಸೇರಿದಂತೆ ರಾಜಕೀಯ, ಚಿತ್ರರಂಗದ ಅನೇಕ ಗಣ್ಯರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೊಲೆ ಆರೋಪಿ ಕಾಲಿಗೆ ಗುಂಡೇಟು

ಶಿವಮೊಗ್ಗ, ಜೂ. ೫: ಕೊಲೆ ಪ್ರಕರಣದ ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಗರದ ಹೊರ ವಲಯದ ಮುದ್ದಿನಕೊಪ್ಪ ಬಳಿ ನಡೆದಿದೆ. ಆಯನೂರು ಬಾರ್‌ನಲ್ಲಿ ಕಳೆದ ರಾತ್ರಿ ಕ್ಯಾಶಿಯರ್‌ಗೆ ಚಾಕು ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಎಂಬಾತನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಪ್ರವೀಣ್ ಮತ್ತು ಶಿವರಾಜ್ ಅವರು ಆರೋಪಿ ಸತೀಶನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಸತೀಶ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತುಂಗಾನಗರ ಪಿಎಸ್‌ಐ ರಾಜುರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಸತೀಶನಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದೂ ಸತೀಶ ಪಿಎಸ್‌ಐ ಮೇಲೆ ಚಾಕುವಿನಿಂದ ದಾಳಿಗೆ ಮುಂದಾಗಿದ್ದ. ಆಗ ಸಬ್‌ಇನ್ಸ್ಪೆಕ್ಟರ್ ರಾಜು ರೆಡ್ಡಿ ಹಾರಿಸಿದ ಗುಂಡು ಸತೀಶನ ಕಾಲಿಗೆ ತಗುಲಿದೆ. ಸತೀಶ ಮತ್ತು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.