ಆಲೂರು-ಸಿದ್ದಾಪುರ, ಜೂ. ೫: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿ ಯಲ್ಲಿ ಕೆಲವು ವರ್ಷ ಗಳಿಂದ ಬೇಸಿಗೆ ಅವಧಿ ಯಲ್ಲಿ ರೈತರು ತಮ್ಮ ಗದ್ದೆಗಳಲ್ಲಿ ಚೆಂಡು ಹೂವು (ಮ್ಯಾರಿ ಗೋಲ್ಡ್) ಬೆಳೆಯನ್ನು ಬೆಳೆಯುತ್ತಿದ್ದಾರೆ. ಜನವರಿ ತಿಂಗಳ ಕೊನೆ ವಾರದಲ್ಲಿ ಚೆಂಡು ಹೂವಿನ ಬೀಜವನ್ನು ಬಿತ್ತನೆ ಮಾಡಿ ಫೆಬ್ರವರಿ ತಿಂಗಳ ಮಧ್ಯದಲ್ಲಿ ಗಿಡವನ್ನು ನೆಡುತ್ತಾರೆ. ಗಿಡ ನೆಟ್ಟು ಒಂದೂವರೆ ತಿಂಗಳಲ್ಲಿ ಗಿಡಗಳಲ್ಲಿ ಹೂವುಗಳು ಬಿಡುತ್ತವೆ. ವಾರದಲ್ಲಿ ೪ ದಿನಕೊಮ್ಮೆ ಚೆಂಡು ಹೂವು ಕಟಾವು ಮಾಡಿ ರೈತರು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ವ್ಯಾಪಾರಿಗಳು ಸ್ಥಳಕ್ಕೆ ಬಂದು ಚೆಂಡು ಹೂವನ್ನು ಖರೀದಿಸುತ್ತಾರೆ. ಚೆಂಡು ಹೂವನ್ನು ಒಂದೂವರೆ ತಿಂಗಳವರೆಗೂ ಕಟಾವು ಮಾಡಬಹುದಾಗಿದ್ದು ನಂತರದ ದಿನದಲ್ಲಿ ಗಿಡದಲ್ಲಿ ಹೂವಿನ ಇಳುವರಿ ಕಡಿಮೆಯಾಗುತ್ತದೆ ಹಾಗೂ ಮುಂಗಾರು ಮಳೆ ಬೀಳುವ ಸಂದರ್ಭದಲ್ಲಿ ಚೆಂಡು ಹೂವಿನ ಗಿಡ ಕುಂಟಿತಗೊಳ್ಳುತ್ತದೆ. ಒಟ್ಟಾರೆ ಚೆಂಡು ಹೂವು ಒಂದೂವರೆ ತಿಂಗಳವರೆಗೆ ಫಸಲು ಪಡೆದುಕೊಳ್ಳುವ ಬೆಳೆಯಾಗಿದ್ದು ಬೇಸಿಗೆಯಲ್ಲಿ ಹಸಿರು ಮೆಣಸಿಗಿಂತ ಕಡಿಮೆ ಖರ್ಚು ಮತ್ತು ಅಧಿಕ ಇಳುವರಿ ಮತ್ತು ಅಧಿಕ ಧಾರಣೆ ಪಡೆಯಬಹುದಾದ ಬೆಳೆಯಾಗಿದೆ ಎಂದು ರೈತರು ಹೇಳುತ್ತಾರೆ. ಹಳದಿ, ಅರಿಶಿಣ, ಕಂದು ಬಣ್ಣ ಚೆಂಡೂ ಹೂವಿನ ತಳಿಗಳಾಗಿದ್ದು ೧ ಎಕೆರೆಗೆ ನೂರು ಗ್ರಾಂ ಚೆಂಡು ಹೂವಿನ ಬಿತ್ತನೆ ಬೀಜ ಬೇಕಾಗಿದ್ದು ನೂರು ಗ್ರಾಂ ಬಿತ್ತನೆ ಬೀಜಕ್ಕೆ ೩ ಸಾವಿರ ರೂ. ಬೆಲೆ ಇದ್ದು ೧ ಎಕರೆ ಚೆಂಡು ಹೂವು ಬೆಳೆಯಲು ರೂ. ೧೦ ರಿಂದ ೧೨ ಸಾವಿರ ಖರ್ಚು ಬರುತ್ತದೆ. ೧ ಎಕರೆಯಲ್ಲಿ ೧ ಸಾವಿರ ಕಿ.ಗ್ರಾ.ನಿಂದ ೧,೩೦೦ ಕಿ.ಗ್ರಾಂ.ವರೆಗೆ ಇಳುವರಿ ಪಡೆಯಬಹುದು ಎಂದು ಚೆಂಡು ಹೂವು ಬೆಳೆದ ರೈತರು ಹೇಳುತ್ತಾರೆ.

ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕೆಲವು ವರ್ಷಗಳಿಂದ ರೈತರು ಚೆಂಡು ಹೂವು ಬೆಳೆಯುತ್ತಿದ್ದಾರೆ. ದುಂಡಳ್ಳಿ, ದೊಡ್ಡ ಬಿಳಹ, ಮಾದರೆ, ಕೂಜಿಗೇರಿ, ಹಂಡ್ಲಿ, ಮೂದರವಳ್ಳಿ, ಶಿರಂಗಾಲ ಮುಂತಾದ ಕಡೆಗಳಲ್ಲಿ ಈ ವರ್ಷ ಚೆಂಡು ಹೂವು ಬೆಳೆಯಲಾಗಿದೆ ಆದರೆ ಕಳೆದ ೩ ವರ್ಷಗಳ ಹಿಂದೆ ಈ ಭಾಗದ ರೈತರು ಎರಡರಿಂದ ೩ ಎಕರೆ ಜಾಗದಲ್ಲಿ ಚೆಂಡು ಹೂವು ಬೆಳೆದಿದ್ದರೂ ಹೂವು ಕಟಾವು ಸಮಯದಲ್ಲಿ ಕೋವಿಡ್-೧೯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಫಸಲಿಗೆ ಬಂದಿದ್ದ ಚೆಂಡು ಹೂವು ಕಟಾವು ಮಾಡದೆ ಗದ್ದೆಯಲ್ಲಿ ಬಿಡಲಾಗಿತ್ತು. ಮತ್ತೆ ಮರು ವರ್ಷವೂ ಕೋವಿಡ್ ಲಾಕ್‌ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಗದ್ದೆಯಲ್ಲಿ ಬೆಳೆದ ಚೆಂಡು ಹೂವು ಕಟಾವು ಮಾಡಲು ಸಾಧ್ಯವಾಗದೆ ಗದ್ದೆಯಲ್ಲಿ ಬಿಟ್ಟಿದ್ದರು. ೨ ವರ್ಷಗಳ ಬಳಿಕ ಮತ್ತೆ ಈಗ ಚೆಂಡು ಹೂವನ್ನು ರೈತರು ಬೆಳೆದಿದ್ದರೂ ೨ ವರ್ಷ ಕಹಿ ಅನುಭವದ ಹಿನ್ನೆಲೆ ಕೇವಲ ಅರ್ಧ ಮತ್ತು ೧ ಎಕರೆಯಷ್ಟು ಗದ್ದೆಗಳಲ್ಲಿ ಈ ಭಾಗದ ರೈತರು ಚೆಂಡು ಹೂವು ಬೆಳೆದಿದ್ದಾರೆ. ಪ್ರಾರಂಭದಲ್ಲಿ ಚೆಂಡು ಹೂವನ್ನು ಕಿ.ಗ್ರಾ.ಗೆ ರೂ. ೩೫ ರಿಂದ ೪೦ ರವರೆಗೂ ಮಾರಾಟ ಮಾಡಿದ್ದಾರೆ. ಈ ವರ್ಷ ಈ ಭಾಗದಲ್ಲಿ ಮುಂಗಾರು ಮಳೆ ತಡವಾಗಿದ್ದು ಚೆಂಡು ಹೂವು ಬೆಳೆಗಾರರಿಗೆ ವರದಾನವಾಗಿತ್ತು. ಆದರೆ ಈಗ ಇಲ್ಲಿ ಒಂದೆರೆಡು ದಿನ ಮಳೆಯಾಗಿರುವ ಹಿನ್ನೆಲೆಯಲ್ಲಿ ಚೆಂಡು ಹೂವಿನ ಬೆಲೆ ರೂ. ೨೦ ರಿಂದ ೨೫ ಗೆ ಕುಸಿದಿದೆ ಎಂದು ಚೆಂಡು ಹೂವು ಬೆಳೆಗಾರರು ಹೇಳುತ್ತಾರೆ. ಆದರೂ ಸರಾಸರಿ ಕಿ.ಗ್ರಾಂ.ಗೆ ರೂ. ೨೫ ಬೆಲೆ ಸಿಕ್ಕಿದರೂ ಅಷ್ಟೇನು ನಷ್ಟವಾಗದು ಎಂದು ಹೇಳುತ್ತಾರೆ. -ದಿನೇಶ್ ಮಾಲಂಬಿ