ಕುಶಾಲನಗರ, ಜೂ. ೬: ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕಾಗಿದೆ ಎಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಬಿಎನ್‌ಎನ್ ಮೂರ್ತಿ ತಿಳಿಸಿದ್ದಾರೆ.

ಅವರು ಕುಶಾಲನಗರದ ಗಂಧದಕೋಟೆ ಅರಣ್ಯ ತರಬೇತಿ ಶಿಬಿರ ಆವರಣದಲ್ಲಿ ನಡೆದ ಕೊಡಗು ವೃತ್ತ ಮಟ್ಟದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನಶೈಲಿ ಸುಧಾರಣೆ, ಆರೋಗ್ಯ ತಪಾಸಣೆಗಳ ಮೂಲಕ ಗುಣಮಟ್ಟದ ಆಹಾರ ಸೇವನೆ ಮತ್ತು ಮಾನಸಿಕ ಒತ್ತಡಕ್ಕೆ ನಿಯಂತ್ರಣ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಅರಣ್ಯ ಇಲಾಖೆ, ಕೊಡಗು ವೃತ್ತದ ಮಟ್ಟದಲ್ಲಿ ಸಿಬ್ಬಂದಿಗಳ ಆರೋಗ್ಯ ಜೀವನಶೈಲಿ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹಲವು ರೋಗಗಳ ತಪಾಸಣೆಗೆ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ಮೈಸೂರಿನ ರಾಮಕೃಷ್ಣ ಆಸ್ಪತ್ರೆಯ ವೈದ್ಯೆ ಡಾ.ದೀಪಿಕಾ ಆರ್ ಅರಸ್, ಮಾತನಾಡಿ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡದೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿದಲ್ಲಿ ಉತ್ತಮ ಆರೋಗ್ಯ ಕಲ್ಪಿಸಿಕೊಳ್ಳಬಹುದು ಎಂದು ತಿಳಿಸಿದರು. ಡಾ. ದೀಪಿಕಾ ಅರಸ್ ಮತ್ತು ಡಾ. ಸಿಂಚನ ಅವರ ನೇತೃತ್ವದ ತಂಡ ಸುಮಾರು ೨೦೦ಕ್ಕೂ ಅಧಿಕ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ವಿವಿಧ ರೀತಿಯ ತಪಾಸಣೆ ನಡೆಸಿ ಜಾಗೃತಿ ಮೂಡಿಸಿದರು. ಮಡಿಕೇರಿ, ವೀರಾಜಪೇಟೆ, ಹುಣಸೂರು ಅರಣ್ಯ ವಿಭಾಗದ ಹಾಗೂ ನಾಗರಹೊಳೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳು, ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಶಿವರಾಂ ಬಾಬು, ಶರಣಬಸಪ್ಪ, ಹರ್ಷಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎ. ಗೋಪಾಲ್, ಶ್ರೀನಿವಾಸ್, ಚೆಂಗಪ್ಪ, ಮೋಹನ್ ಬಿದಿರಿ, ವಲಯ ಅರಣ್ಯಾಧಿಕಾರಿ ಕೆ.ವಿ. ಶಿವರಾಮ್, ಐಶ್ವರ್ಯ ಮತ್ತಿತರರು ಇದ್ದರು.