ಸೋಮವಾರಪೇಟೆ, ಜೂ. ೫: ಪ್ರಸಕ್ತ ಸಾಲಿನ ಮಳೆಗಾಲವನ್ನು ಎದುರಿಸಲು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ಈಗಾಗಲೇ ರಾಜಕಾಲುವೆ ದುರಸ್ತಿ, ಅಪಾಯಕಾರಿ ಮರಗಳ ಕೊಂಬೆಗಳ ತೆರವು, ಚರಂಡಿ ದುರಸ್ತಿ ಕಾರ್ಯಗಳನ್ನು ನಿರ್ವಹಿಸಿದೆ.
ಇಲ್ಲಿನ ಲೋರ‍್ಸ್ ಕಾಲೋನಿ ಯಲ್ಲಿರುವ ರಾಜ ಕಾಲುವೆಯ ಹೂಳು ತೆಗೆದು ನೀರಿನ ಸರಾಗ ಹರಿವಿಗೆ ಈಗಾಗಲೇ ಕ್ರಮಕೈಗೊಳ್ಳ ಲಾಗಿದೆ. ಯಂತ್ರಗಳ ಸಹಾಯದಿಂದ ರಾಜಕಾಲುವೆ ದುರಸ್ತಿ ಮಾಡಲಾಗಿದೆ.
ಮಳೆಗಾಲದಲ್ಲಿ ಪಟ್ಟಣದ ನೀರು ರಾಜಕಾಲುವೆಯಲ್ಲಿ ಹರಿಯಬೇಕಿರುವ ಕಾರಣ, ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಜಕಾಲುವೆಯಲ್ಲಿ ಹೂಳು ತುಂಬಿದ್ದು, ನಿರ್ವಹಣೆ ಮಾಡದಿದ್ದರೆ ಮಳೆಗಾಲದಲ್ಲಿ ಮನೆಗಳಿಗೆ ಕೊಳಚೆ ನೀರು ನುಗ್ಗಲಿದೆ. ಇದರೊಂದಿಗೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಇದೆ. ಈ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಜಕಾಲುವೆ ಯನ್ನು ದುರಸ್ತಿಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.
ಇದರೊಂದಿಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವು ಮಾಡಲಾಗಿದೆ. ತಗ್ಗುಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ಸಣ್ಣ ಯಂತ್ರದ ಸಹಾಯದಿಂದ ಚರಂಡಿ ಶುಚಿಗೊಳಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಜಾಸಿಂ ಖಾನ್ ಮಾಹಿತಿ ನೀಡಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿಯೇ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ, ಕ್ರಿಮಿ ಕೀಟಗಳ ನಿರ್ಮೂಲನೆಗೆ ಔಷಧಿ ಸಿಂಪಡಿಸುವ ಕಾರ್ಯ ಮಾಡಲಾಗುವುದು. ಒಟ್ಟಾರೆ ಮಳೆಗಾಲದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಟಾಸ್ಕ್ ಫೋರ್ಸ್ ಮೂಲಕ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ ಎಂದು ಜಾಸಿಂ ಖಾನ್ ತಿಳಿಸಿದ್ದಾರೆ.