ಕಡಂಗ/ಮಡಿಕೇರಿ, ಜೂ. ೩: ಆಹಾರ ಅರಸಿ ಕಾಫಿ ತೋಟಕ್ಕೆ ಬಂದ ಕಾಡಾನೆ ಕೆರೆಗೆ ಬಿದ್ದು ಸಿಲುಕಿಕೊಂಡ ಘಟನೆ ಕರಡ ಗ್ರಾಮದಲ್ಲಿ ನಡೆದಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ನರಳಾಡುತ್ತಿದ್ದ ಕಾಡಾನೆಯನ್ನು ರಕ್ಷಿಸಿದೆ. ಆದರೆ, ಗಾಬರಿಗೊಂಡ ಕಾಡಾನೆ ಮೇಲೆದ್ದು ಬರುತ್ತಿದ್ದಂತೆ ರಕ್ಷಿಸಿದವರ ಮೇಲೆ ಎರಗಲು ಪ್ರಯತ್ನಿಸಿದೆ.

ಕರಡ ಗ್ರಾಮದ ನಡಿಕೇರಿಯಂಡ ಅಯ್ಯಣ್ಣ ಅವರ ತೋಟದ ಕೆರೆಯಲ್ಲಿ ಈ ಘಟನೆ ಸಂಭವಿಸಿದ್ದು, ರಕ್ಷಣೆಯಾದ ಸಲಗ ಇದೀಗ ಕಾಡು ಸೇರಿದೆ.

ಬೆಳಿಗ್ಗೆ ಕಾಡಾನೆಯ ಕಿರುಚಾಟದ ಶಬ್ದ ಕೇಳಿದ ಸುತ್ತಮುತ್ತ ನಿವಾಸಿಗಳಿಗೆ ಘಟನೆ ಗೋಚರಿಸಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸ್ಥಳೀಯರ ನೆರವಿನೊಂದಿಗೆ ಕಾಡಾನೆಯನ್ನು ಮೇಲೆತ್ತಲು ಕೆರೆಯ ಬದಿಯಲ್ಲಿದ್ದ ಮಣ್ಣನ್ನು ಸಮತಟ್ಟು ಮಾಡಿ ಮರದ ದಿಮ್ಮಿಗಳನ್ನು ಇಟ್ಟು ಆನೆ ಮೇಲೆ ಬರುವಂತೆ ಮಾಡಲು ಯತ್ನಿಸಿದ್ದಾರೆ. ಆ ಬಳಿಕ ಸಿಲುಕಿದ್ದ ಆನೆ ಸೊಂಡಿಲಿನಿAದ ಮರದ ದಿಮ್ಮಿ ಹಿಡಿದು ಮೇಲೆ ಬರಲು ಪ್ರಯತ್ನಿಸಿ ಕೊನೆಗೂ ಕೆರೆಯಿಂದ ಆಚೆ ಬಂದಿದೆ. ನಿರಂತರ ೪ ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಯಿತು.

ಮೇಲೆ ಬಂದ ಆನೆ ನಿತ್ರಾಣಗೊಂಡ ಸ್ಥಿತಿಯಲ್ಲಿತ್ತು. ಕೆಲಕಾಲದ ನಂತರ ಚೇತರಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಓಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ನಂತರ ಪಟಾಕಿ ಸಿಡಿಸಿ ಸ್ಥಳದಿಂದ ಕಾಡಾನೆಯನ್ನು ಅಟ್ಟಲು ಮುಂದಾದ ಸಂದರ್ಭ ಸಮೀಪದಲ್ಲಿದ್ದ ಅರಣ್ಯ ಇಲಾಖೆ ವಾಹನದ ಮೇಲೆ ದಾಳಿ ನಡೆಸಿ ಆಕ್ರೋಶ ತೋರಿದೆ. ನಂತರ ಪಟಾಕಿ ಸಿಡಿಸಿ ಆನೆಯನ್ನು ಸಮೀಪದ ದೇವರಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣ ಬಸಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಎ. ನೆಹರೂ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ. ಎಂ. ದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಧಿಕಾರಿಗಳಾದ ಸಿ. ಟಿ. ಅನಿಲ್, ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕ ಮಾಲತೇಶ್ ಬಡಿಗೇರ್, ಆರ್.ಆರ್.ಟಿ. ಸಿಬ್ಬಂದಿಗಳಾದ ಸುರೇಶ, ಅನಿಲ್, ವಿಕಾಸ್, ಮಹೇಶ್, ಲತೇಶ, ಭರತ್, ನಾಣಯ್ಯ, ಅಶ್ವತ್ಥ್, ನಾಚಪ್ಪ ಹಾಗೂ ವಾಹನ ಚಾಲಕ ಅಶೋಕ್ ಭಾಗವಹಿಸಿದ್ದರು.

-ಮುಬಾರಕ್/ ನೌಫಲ್