ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಜನತೆಯ ಧ್ವನಿಗೆ ಪೂರಕವಾಗಿ ಸ್ಪಂದಿಸಿದ್ದು ಅಭಿನಂದನಾರ್ಹರಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಅಭಿನಂದನೆ ಸಲ್ಲಿಸಬೇಕಾಗಿದೆ.

ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಇದರಿಂದ ಜಿಲ್ಲೆಯ ಜನತೆ, ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮಡಿಕೇರಿ ಕ್ಷೇತ್ರದಿಂದ ಜಯಗಳಿಸಿದ್ದ ಮಂಥರ್‌ಗೌಡ ಹಾಗೂ ವೀರಾಜಪೇಟೆ ಕ್ಷೇತ್ರದಿಂದ ಜಯಗಳಿಸಿದ್ದ ಎ. ಎಸ್. ಪೊನ್ನಣ್ಣ ಇವರಿಬ್ಬರ ಪೈಕಿ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದುದಕ್ಕೆ ಜನರು ಆಕ್ರೋಶ ಗೊಂಡಿದ್ದರು.

ಜನಾಂಗೀಯ ಪ್ರಾತಿನಿಧ್ಯ ಬಂದಾಗ ಕೊಡವ ಜನಾಂಗಕ್ಕಾದರೂ ಒಂದು ಸಚಿವ ಸ್ಥಾನ ನೀಡ ಬೇಕಾಗಿತ್ತು ಎಂದು ತಾ. ೨೮.೫.೨೦೨೩ರ ‘‘ಶಕ್ತಿ’’ಯಲ್ಲಿ ‘‘ಎಲ್ಲರಿಗೂ ಕಾವೇರಿ ಬೇಕು-ಕೊಡಗು ಬೇಡ’’ ಎನ್ನುವ ಶೀರ್ಷಿಕೆಯಡಿ ಸಂಪಾದಕೀಯ ಪ್ರಕಟಗೊಂಡಿತ್ತು. ಜೊತೆಗೆ ಉಪಸಂಪಾದಕ ಶಶಿ ಸೋಮಯ್ಯ ಅವರು ‘ಬಿ.ಜೆ.ಪಿ. ಇರಲಿ, ಕಾಂಗ್ರೆಸ್ ಬರಲಿ-ಕೊಡಗು ಮಾತ್ರ ನಗಣ್ಯ’ ಈ ಲೇಖನದ ಮೂಲಕ ವಿಮರ್ಶೆ ನಡೆಸಿದ್ದರು. ಲೇಖಕ ಇಸ್ಮಾಯಿಲ್ ಕಂಡಕೆರೆ ಕೂಡಾ ಪೂರಕ ಲೇಖನ ಬರೆದಿದ್ದರು. ಈ ಎಲ್ಲಾ ಬರಹಗಳಿಗೆ ಕೊಡಗಿನ ಜನ ಸ್ಪಂದಿಸಿದ್ದರು. ‘‘ಶಕ್ತಿ’’ಯ ಸಂಪಾದಕೀಯ ಮತ್ತು ಲೇಖನ ಅರ್ಥಗರ್ಭಿತವಾಗಿದೆ; ಇದು ಸರಕಾರದ ಕಣ್ಣು ತೆರೆಸಲಿದೆ ಎಂದು ಬಹುತೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೆಲವರು ಮೊಬೈಲ್ ಮೂಲಕ, ಇನ್ನು ಕೆಲವರು ವಾಟ್ಸಾಪ್ ಮೂಲಕ ಹಾಗೂ ಮತ್ತೆ ಕೆಲವರು ಲಿಖಿತ ಮೂಲಕ ಪ್ರಶಂಸಿಸಿ ಸ್ಪಂದಿಸಿದ್ದರು. ಆದರೆ, ಇದೀಗ ಸರ್ಕಾರ ಸ್ಪಂದಿಸಿರುವುದರಿAದ ಜನತೆಯ ಅಭಿಪ್ರಾಯಗಳನ್ನು ಈಗ ಪ್ರಕಟಿಸುತ್ತಿಲ್ಲ.

ಏಕೆಂದರೆ ಈಗಾಗಲೇ ಮುಖ್ಯಮಂತ್ರಿಯವರು ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ತಮ್ಮ ಕಾನೂನು ಸಲಹೆಗಾರರಾಗಿ ನೇಮಿಸಿದ್ದಾರೆ. ಇದು ಒಂದು ಶುಭಸೂಚನೆಯಾಗಿದ್ದು, ಮತ್ತೆ ಸರಕಾರವನ್ನು ಟೀಕಿಸುವಂತಹ ಪ್ರಮೇಯ ಸದ್ಯಕ್ಕೆ ಇಲ್ಲದಿರುವದರಿಂದ ಮುಖ್ಯಮಂತ್ರಿಯವರ ಸ್ಪಂದನಕ್ಕೆ ‘‘ಶಕ್ತಿ’’ ಜನತೆಯ ಪರವಾಗಿ ಅಭಿನಂದಿಸುತ್ತದೆ.

ಪೊನ್ನಣ್ಣ ಅವರು ಸಚಿವರಾಗದಿದ್ದರೂ ಕಾನೂನು ಸಲಹೆಗಾರರಾಗಿ ಸಚಿವ ಸಂಪುಟ ಸಭೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಇದರಿಂದಾಗಿ ಕೊಡಗು ಜಿಲ್ಲೆಯ ಸಮಸ್ಯೆಗಳು ಬಂದಾಗ ಅಲ್ಲಿ ಪ್ರಾತಿನಿಧ್ಯ ಇರುವಂತಾಗುತ್ತದೆ.

ಇಬ್ಬರು ಶಾಸಕರು, ಜೊತೆಯಲ್ಲಿ ಕಾನೂನು ಸಲಹೆಗಾರರಾಗಿ ಆಯ್ಕೆಯಾಗುವ ಮೂಲಕ ಪೊನ್ನಣ್ಣ ಅವರು ಕೊಡಗಿನ ಅಭಿವೃದ್ಧಿಗೆ ಆದ್ಯತೆ ವಹಿಸಲಿ. ರಾಜಕೀಯ ರಹಿತವಾಗಿ ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸಲ್ಪಡಲಿ ಎಂದು ‘‘ಶಕ್ತಿ’’ ಈ ಮೂಲಕ ಹಾರೈಸುತ್ತದೆ. ಅದೇ ರೀತಿ ಈ ಹಿಂದೆ ಜನಪ್ರತಿನಿಧಿಗಳಾಗಿದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ್ದ ವಿವಿಧ ಪಕ್ಷಗಳ ಪ್ರಮುಖರೂ ಕೂಡ ಅಗತ್ಯ ಬಂದಾಗ ಆಡಳಿತದವರನ್ನು ಎಚ್ಚರಗೊಳಿಸಿ ತಿದ್ದುವ ಮೂಲಕ ಕೊಡಗಿನ ಸೇವೆಯನ್ನು ಮುಂದುವರಿಸಲಿ. ಜೊತೆಗೆ ಎಂಎಲ್‌ಸಿ ಸುಜಾಕುಶಾಲಪ್ಪ ಅವರು ಕೈಜೋಡಿಸಲಿ ಎಂದು ಈ ಮೂಲಕ ಆಶಿಸುತ್ತೇವೆ.

- ಜಿ. ರಾಜೇಂದ್ರ, ಪ್ರಧಾನ ಸಂಪಾದಕ