'ವೀರಾಜಪೇಟೆ, ಜೂ. ೪: ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸುವ ಮೂಲಕ ಜೀವನದಲ್ಲಿ ತಮ್ಮ ಗುರಿ ಮುಟ್ಟುವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಲಹೆ ನೀಡಿದರು.
ಪ್ರಗತಿ ಶಾಲಾ ಆಡಳಿತ ಮಂಡಳಿ ವತಿಯಿಂದ ಶಾಲಾ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕಿನ ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಹೊರಗಿನ ಪ್ರಪಂಚದ ಅರಿವು ಅಗತ್ಯ. ಇಂದಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಪುಸ್ತಕದಲ್ಲಿರುವ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬಿಳಗಿ ಮಾತನಾಡಿ ವೀರಾಜಪೇಟೆ ತಾಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದಾರೆ. ರಾಜ್ಯದಲ್ಲಿ ಕೊಡಗು ಜಿಲ್ಲೆ ಕಳೆದ ಸಾಲಿನಲ್ಲಿ ೧೪ನೇ ಸ್ಥಾನದಲ್ಲಿತ್ತು. ಈ ಬಾರಿ ೯ನೇ ಸ್ಥಾನ ತಲುಪಿದ್ದು ಮುಂದಿನ ವರ್ಷ ೫ನೇ ಸ್ಥಾನಕ್ಕೆ ಬರುವಂತಾಗಬೇಕು ಎಂದರು. ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆ ವಿದ್ಯಾರ್ಥಿನಿ ಟಿ.ವಿ. ವೈಷ್ಣವಿ, ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ದೀತ್ಯಾ ದೇಚಮ್ಮ, ಗೋಣಿಕೊಪ್ಪಲು ಸಂತ ಥಾಮಸ್ ಪ್ರೌಢಶಾಲೆ ವಿದ್ಯಾರ್ಥಿ ಎಸ್.ಎಂ. ಶಾಹಿರಾ, ಟಿ.ಶೆಟ್ಟಿಗೇರಿ ರೂಟ್ಸ್ ಪ್ರೌಢಶಾಲೆ ವಿದ್ಯಾರ್ಥಿ ಶ್ರಾವ್ಯ ಚೋಂದಮ್ಮ ಅವರುಗಳನ್ನು ಸನ್ಮಾನಿಸಲಾಯತು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಮಾದಂಡ ಎಸ್. ಪೂವಯ್ಯ, ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ನೋಡಲ್ ಅಧಿಕಾರಿ ಅಯ್ಯಪ್ಪ ಉಪಸ್ಥಿತರಿದ್ದರು.