ಕುಶಾಲನಗರ, ಜೂ. ೪: ಜಿಲ್ಲಾಧಿಕಾರಿ ಡಾ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದಲ್ಲಿ ಐಡಿಎಸ್ಎಂಟಿ ಸಮಿತಿ ಸಭೆ ನಡೆಯಿತು.
ಕುಶಾಲನಗರ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಗುಂಡುರಾವ್ ಬಡಾವಣೆ ನಿವೇಶ ನಗರ ಹರಾಜು ಪ್ರಕ್ರಿಯೆ ಮತ್ತು ಅಭಿವೃದ್ಧಿ ಬಗ್ಗೆ ಜಿಲ್ಲಾಧಿಕಾರಿಗಳು ಸಮಿತಿ ಸದಸ್ಯರಿಂದ ಮಾಹಿತಿ ಪಡೆದರು.
ಬಡಾವಣೆಯ ಅಭಿವೃದ್ಧಿ ಮತ್ತು ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಕಟ್ಟಡದ ಬಗ್ಗೆ ಮತ್ತು ಈ ಹಿಂದೆ ಹರಾಜು ಪ್ರಕ್ರಿಯೆ ನಡೆದ ನಿವೇಶನಗಳ ಮಾಲೀಕರ ದಾಖಲಾತಿ ನೋಂದಣಿ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸಮಿತಿಯ ಸದಸ್ಯರು ಮತ್ತು ಉಪ ವಿಭಾಗಾಧಿಕಾರಿಗಳಾದ ಯತೀಶ್ ಉಳ್ಳಾಲ್, ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸಪ್ಪ, ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್, ಹೇಮಂತ್ ಕುಮಾರ್, ಪಟ್ಟಣ ಪಂಚಾಯಿತಿ ಮತ್ತು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಒಳಚರಂಡಿ ಯೋಜನೆ ಅಧಿಕಾರಿಗಳು ಇದ್ದರು.