ಮಡಿಕೇರಿ, ಜೂ. ೨: ‘ಆನಿಮಲ್ ರಿಲೀಫ್ ಕೊಡಗು’ (ಎ.ಆರ್.ಕೆ) ವತಿಯಿಂದ ಇತ್ತೀಚೆಗೆ ಕಡಗದಾಳು ಸರಕಾರಿ ಶಾಲೆಯಲ್ಲಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಹಾಗೂ ರೇಬೀಸ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ‘ಆನಿಮಲ್ ವೆಲ್ಫೇರ್ ರ‍್ಗನೈಸೇಶನ್’(ಎ.ಎಸ್.ಆರ್.ಎ) ಸಹಭಾಗಿತ್ವದಲ್ಲಿ ಎ.ಆರ್.ಕೆ ಸಂಘದ ವತಿಯಿಂದ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.

ಇದವರೆಗೆ ೭ ಶಿಬಿರಗಳನ್ನು ಎ.ಆರ್.ಕೆ ವತಿಯಿಂದ ಆಯೋಜಿಸಲಾಗಿದೆ. ಪ್ರತಿ ಬಾರಿ ೧೫೦ ರಿಂದ ೨೦೦ ನಾಯಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಶಿಬಿರ ಆಯೋಜನೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ವರ್ಷ ಸಣ್ಣ ಪ್ರಮಾಣದಲ್ಲಿ ಮತ್ತೇ ಶಿಬಿರ ನಡೆಸಿದ್ದು, ಮುಂದಿನ ಬಾರಿ ೫ ದಿನಗಳ ಕಾಲ ಮಡಿಕೇರಿಯಲ್ಲಿ ಶಿಬಿರ ಆಯೋಜಿಸಲಾಗುವುದಾಗಿ ಎ.ಆರ್.ಕೆ ಸ್ಥಾಪಕಾಧ್ಯಕ್ಷೆ ಲೀಲಾ ಅವರು ಮಾಹಿತಿ ನೀಡಿದ್ದಾರೆ.

೨ ದಿನಗಳ ಕಾಲ ನಡೆದ ಶಿಬಿರದಲ್ಲಿ ಒಟ್ಟು ೫೪ ನಾಯಿಗಳಿಗೆ ಡಾ.ಚೇತನ್ ಅವರು ಸಂತಾನಹರಣ ಚಿಕಿತ್ಸೆ ನೆರವೇರಿಸಿದರು. ಬೆಂಗಳೂರಿನ ಎ.ಎಸ್.ಆರ್.ಎ ಸಂಘದ ದೀಪಕ್, ಸುಮನ್, ಇಂದ್ರಜಿತ್ ಹಾಗೂ ಬಿಪ್ಲಾಕ್ ಅವರು ಈ ಸಂದರ್ಭ ಹಾಜರಿದ್ದರು.

ಎ.ಆರ್.ಕೆ. ಸ್ಥಾಪಕ ಅಧ್ಯಕ್ಷೆ ಲೀಲಾ ಆಲ್ವರೆಜ್, ಖಜಾಂಚಿ ಕಾವೇರಿ ಮುತ್ತಣ್ಣ, ಕಾರ್ಯದರ್ಶಿ ಸಿ.ಬಿ ಚಂಗಪ್ಪ ಹಾಗೂ ಸಲಹೆಗಾರರಾದ ಡಾ. ಕೆ.ಪಿ ಅಯ್ಯಪ್ಪ, ಮೀನಾ ಕಾರ್ಯಪ್ಪ ಹಾಗೂ ಡಾ.ಚಿದಾನಂದ್ ಅವರುಗಳ ಮುಂದಾಳತ್ವದಲ್ಲಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.