ಕುಶಾಲನಗರ, ಜೂ.೨: ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ೫೦ ಕೋಟಿ ರೂ.ಗಳ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ.

ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಸಂ. ಆಲೂರು ಸೇರಿದಂತೆ ರಾಜ್ಯದ ನೂತನ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಸಂದರ್ಭ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆ. ತಮ್ಮ ಸರ್ಕಾರ ಉನ್ನತ ಶಿಕ್ಷಣವನ್ನು ವೈಜ್ಞಾನಿಕ ತಳಹದಿಯಲ್ಲಿ ಬಲಪಡಿಸಲು ಬದ್ಧವಾಗಿದೆ. ಸಾಮಾಜಿಕ ಮೌಲ್ಯ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವವಿದ್ಯಾಲಯಗಳು ಶ್ರಮಿಸಬೇಕು. ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿಶ್ವವಿದ್ಯಾಲಯಗಳಿಗಿದೆ. ತಮ್ಮ ನಿಜವಾದ ಉದ್ದೇಶಗಳಿಂದ ವಿಶ್ವವಿದ್ಯಾಲಯಗಳು ವಿಮುಖವಾಗಿ ಪ್ರತಿಗಾಮಿ ಆದರೆ ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯ ಕರಾಳ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂದರ್ಭ ನುಡಿದರು ಎಂದು ಕೊಡಗು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಅಶೋಕ್ ಆಲೂರು ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕೊಡಗು ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಮತ್ತು ಒಂದು ಶೈಕ್ಷಣಿಕ ಬ್ಲಾಕ್ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ೭೫ನೇ ವರ್ಷಕ್ಕೆ ಕಾಲಿಡುತ್ತಿರುವ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮಹಾವಿದ್ಯಾಲಯದ ನಿರ್ವಹಣೆ, ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ನೂತನ ವಿಶ್ವವಿದ್ಯಾಲಯಗಳ ಸಿಬ್ಬಂದಿಗಳ ವೇತನದ ಬಗ್ಗೆಯೂ ಚರ್ಚಿಸಲಾಯಿತು. ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಉಪಕುಲಪತಿಗಳು ತಿಳಿಸಿದ್ದಾರೆ.

ಇದೇ ಸಂದರ್ಭ ಉನ್ನತ ಶಿಕ್ಷಣ ಸಚಿವರನ್ನು ಕೂಡ ಉಪಕುಲಪತಿಗಳ ನಿಯೋಗ ಭೇಟಿ ಮಾಡಿ ಅಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯದಲ್ಲೇ ಉಪಕುಲಪತಿಗಳ ಮತ್ತೊಂದು ಸಭೆ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ನಡೆಯಲಿದೆ.

ಈ ಸಂದರ್ಭ ನಿಯೋಗದಲ್ಲಿ ಕೊಡಗು ವಿವಿಯ ಪ್ರೊ. ಅಶೋಕ್ ಆಲೂರು, ಕೊಪ್ಪಳ ವಿವಿಯ ಡಾ. ಬಿ.ಕೆ.ರವಿ, ಬಾಗಲಕೋಟೆ ವಿವಿಯ ಪ್ರೊ. ದೇಶಪಾಂಡೆ, ಹಾವೇರಿ ವಿವಿಯ ಡಾ. ಜಂಗಮಶೆಟ್ಟಿ, ಬೀದರ್ ವಿವಿಯ ಪ್ರೊ. ಬಿರಾದಾರ್, ಹಾಸನ ವಿವಿಯ ಪ್ರೊ. ತಾರಾನಾಥ್, ಚಾಮರಾಜನಗರ ವಿವಿಯ ಉಪಕುಲಪತಿ ಪ್ರೊ. ಗಂಗಾಧರ್ ಇದ್ದರು.

-ಚಂದ್ರಮೋಹನ್