ಸಿದ್ದಾಪುರ, ಜೂ. ೧: ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು-ನೇತಾಜಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಪರಿಣಾಮ ಇಲ್ಲಿನ ನಿವಾಸಿಗಳು ಹೊಸ್ಕೇರಿ ಗ್ರಾಮ ಪಂಚಾಯಿತಿ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಎದುರಾಗಿದ್ದು, ಚೆಸ್ಕಾಂ ನಿರ್ಲಕ್ಷö್ಯದಿಂದಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿ ಸಿದ ಪ್ರತಿಭಟನಾಕಾರರು ಚೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವೈ ಪ್ರಭುಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೋಲ್ಟೇಜ್ ಸಮಸ್ಯೆ ವಿಪರೀತವಾಗಿದೆ. ಚೆಸ್ಕಾಂ ಇಲಾಖೆ ಕಳಪೆ ಟಿಸಿ ಅಳವಡಿಸಿದ್ದರಿಂದ ಸಮಸ್ಯೆ ಆಗಿದೆ ಎಂದು ದೂರಿದರು. ಚೆಸ್ಕಾಂ ಅಧಿಕಾರಿ ಸೂಕ್ತ ರೀತಿಯಲ್ಲಿ ಗ್ರಾಮ ಪಂಚಾಯಿತಿ ಜತೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದರು.
ವಾರ್ಡ್ ಸದಸ್ಯ ಯೂಸುಫ್ ಮಾತನಾಡಿ, ನೇತಾಜಿ ನಗರದಲ್ಲಿ ೨೦೦ಕ್ಕೂ ಹೆಚ್ಚು ಮನೆಗಳಿದ್ದು, ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ನೀಡಲು ಚೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಇಸ್ಮಾಯಿಲ್, ಗುರುರಾಜ್, ರಕ್ಮಿಣಿ, ಹಬೀಬ್, ರಾಮಕೃಷ್ಣ, ಸಲೀಂ ಮತ್ತಿತರರು ಇದ್ದರು.