ಸೋಮವಾರಪೇಟೆ, ಜೂ. ೧: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅನುಷ್ಠಾನಗೊಂಡಿದ್ದರೂ ಸಹ ಅವೈಜ್ಞಾನಿಕವಾಗಿರುವುದರಿಂದ ಸಮೀಪದ ಐಗೂರು ಗ್ರಾ.ಪಂ. ವ್ಯಾಪ್ತಿಯ ಹೊಸತೋಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಪ್ರತಿ ಗ್ರಾಮಗಳಿಗೂ ಸಮರ್ಪಕ ಕುಡಿಯುವ ನೀರಿನ ಸರಬರಾಜಿಗಾಗಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉದ್ದೇಶಿತ ಜಲಜೀವನ್ ಮಿಷನ್ ಯೋಜನೆಯಡಿ ಹೊಸತೋಟದಲ್ಲಿ ಕಾಮಗಾರಿ ನಡೆದಿದ್ದರೂ, ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳದಿರುವು ದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕುಡಿಯುವ ನೀರು ಸರಬರಾಜಿಗಾಗಿ ಪ್ಲಾಸ್ಟಿಕ್ ಪೈಪನ್ನು ಮಡಿಕೇರಿ-ಹಾಸನ ರಾಜ್ಯ ಹೆದ್ದಾರಿ ಬದಿಯಲ್ಲಿ ಅಳವಡಿಸಿದ್ದು, ಕಳಪೆ ಗುಣಮಟ್ಟದ್ದಾಗಿರುವುದರಿಂದ ಅಲ್ಲಲ್ಲಿ ಒಡೆದು ಹೋಗುತ್ತಿದೆ. ಗುತ್ತಿಗೆದಾರರು ಸರಿಪಡಿಸಿ ಹೋದ ಕೆಲವೇ ದಿನಗಳಲ್ಲಿ ಮತ್ತೆ ಪೈಪ್ ಹಾನಿಗೀಡಾಗುತ್ತಿದ್ದು, ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೋಡಿ ಪೈಪ್ ಸರಿಪಡಿಸುವುದೇ ಕೆಲಸವಾಗಿದೆ.
ಕೆಲವೊಮ್ಮೆ ಗುಂಡಿಗಳನ್ನು ಹಾಗೆಯೇ ಬಿಡುವುದರಿಂದ ರಾತ್ರಿ ಸಂದರ್ಭ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ ಎಂದು ಸ್ಥಳೀಯ ನಿವಾಸಿ ಕೆ.ಪಿ. ದಿನೇಶ್ ದೂರಿದ್ದಾರೆ.
ಗ್ರಾಮದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಂಬAಧಿಸಿದ ಗ್ರಾ.ಪಂ.ನ ಗಮನ ಸೆಳೆದಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಬೇಕೆಂದು ಸ್ಥಳೀಯ ನಿವಾಸಿಗಳಾದ ಕೆ.ಬಿ. ಸುಕೇಶ್, ಫೈಸಲ್, ಗಣೇಶ್, ಹಮೀದ್, ಸೈದು ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.