ವರದಿ : ವಿಜಯ್ ಹಾನಗಲ್

ಸೋಮವಾರಪೇಟೆ, ಜೂ. ೧ : ಸೋಮವಾರಪೇಟೆ ಪಟ್ಟಣಕ್ಕೆ ಕಾಣುವಂತಿರುವ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ಬರೋಬ್ಬರಿ ೪ ಕೋಟಿಗೂ ಅಧಿಕ ವೆಚ್ಚದ ೨ ಬೃಹತ್ ಯೋಜನೆಗಳು ಅಪೂರ್ಣ ಗೊಂಡಿವೆ. ಇದರಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿ ಕಳೆದ ೧೦ ವರ್ಷ ಗಳಿಂದಲೂ ಕುಂಟುತ್ತಾ ಸಾಗುತ್ತಿದ್ದರೆ, ಶತಮಾನೋತ್ಸವ ಭವನವಂತೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಂತಾಗಿದೆ.

ಈ ಎರಡು ಬೃಹತ್ ಯೋಜನೆ ಗಳನ್ನು ಪೂರ್ಣಗೊಳಿಸುವಲ್ಲಿ ಈವರೆಗಿನ ಆಡಳಿತ ವರ್ಗ ಹಾಗೂ ಅಧಿಕಾರಿ ವರ್ಗ ನಿರಾಸಕ್ತಿ ತೋರಿದ್ದು, ಸಾರ್ವಜನಿಕರ ಹೋರಾಟವೂ ನಿಂತ ನೀರಾಗಿದೆ. ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಲನೆಗೊಂಡ ಶತಮಾನೋತ್ಸವ ಭವನ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭ ಗೊಂಡ ಸಿಂಥೆಟಿಕ್ ಟರ್ಫ್ ಕಾಮ ಗಾರಿಗಳು ಇಂದಿಗೂ ಪೂರ್ಣ ಗೊಂಡಿಲ್ಲ. ಬಿಜೆಪಿ, ಕಾಂಗ್ರೆಸ್, ಕಾಂಗ್ರೆಸ್-ಜೆಡಿಎಸ್, ಬಿಜೆಪಿ ಸರ್ಕಾರಗಳು ರಾಜ್ಯದಲ್ಲಿ ಅಧಿಕಾರ ನಡೆಸಿದರೂ ಸೋಮವಾರಪೇಟೆಯ ಈ ಎರಡು ಯೋಜನೆಗಳು ಮಾತ್ರ ಗುರಿ ಮುಟ್ಟಿಲ್ಲ. ಇದೀಗ ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ಸ್ಥಳೀಯ ವಾಗಿ ಶಾಸಕರೂ ಬದಲಾಗಿದ್ದಾರೆ. ಚುನಾವಣೆಯ

(ಮೊದಲ ಪುಟದಿಂದ) ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸೋಮವಾರಪೇಟೆಯ ಈ ಎರಡು ಬೃಹತ್ ಯೋಜನೆಗಳನ್ನು ಮುಂದಿಟ್ಟುಕೊAಡು ಆಡಳಿತ ಪಕ್ಷದ ಶಾಸಕರನ್ನು ಟೀಕಿಸಿತ್ತು. ಇದೀಗ ನೂತನ ಶಾಸಕರಾಗಿ ಡಾ. ಮಂಥರ್‌ಗೌಡ ಅವರು ಆಯ್ಕೆಯಾಗಿದ್ದು, ಈ ಎರಡೂ ಯೋಜನೆಗಳು ಅಂತಿಮ ಘಟಕ್ಕೆ ತಲುಪುವ ವಿಶ್ವಾಸವನ್ನು ಸಾರ್ವಜನಿಕರು ಹೊಂದಿದ್ದಾರೆ.

ಕುAಟುತ್ತಿರುವ ಟರ್ಫ್ ಕಾಮಗಾರಿ: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿ ನಂತರದ ದಿನಗಳಲ್ಲಿ ಹಲವಷ್ಟು ಅಡೆತಡೆಗಳನ್ನು ಕಂಡ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿ, ಆಮೆಗತಿಯನ್ನೂ ನಾಚಿಸುತ್ತಿದೆ!

ಭೂಮಿಪೂಜೆ ನೆರವೇರಿ ಬರೋಬ್ಬರಿ ೧೦ ವರ್ಷಗಳಾದರೂ ಇಂದಿಗೂ ಟರ್ಫ್ ಕಾಮಗಾರಿ ಪೂರ್ಣಗೊಂಡಿಲ್ಲ. ಕಳೆದ ೨ ವರ್ಷಗಳ ಹಿಂದಷ್ಟೇ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯು ತರಾತುರಿಯಲ್ಲಿ ಟರ್ಫ್ ಮ್ಯಾಟ್ ಅಳವಡಿಸಿದ್ದು, ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ.

ಇನ್ನೂ ನಿರ್ಮಾಣದ ಹಂತದಲ್ಲಿಯೇ ಇರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿದ್ದು, ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿತ್ತೇ? ಎಂಬ ಸಂಶಯ ಮೂಡುವಂತಾಗಿದೆ.

ಅಪೂರ್ಣ ಕಾಮಗಾರಿ: ಬಿಲ್ ಮಾಡಿಸುವ ಸಲುವಾಗಿ ಮೈದಾನಕ್ಕೆ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ವಾಟರ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ. ವಿದ್ಯುತ್ ಸಂಪರ್ಕ, ಟ್ರಾನ್ಸ್ಫಾರ್ಮರ್ ಒದಗಿಸದೇ ಇದ್ದರೂ ಮ್ಯಾಟ್ ಅಳವಡಿಸಲಾಗಿದೆ.

ಈಗಾಗಲೇ ಅಳವಡಿಸಿರುವ ಟರ್ಫ್ ಅಲ್ಲಲ್ಲಿ ಕಿತ್ತುಬರುತ್ತಿದೆ. ಬಿಸಿಲಿಗೆ ಒಣಗಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಟರ್ಫ್ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಮ್ಯಾಟ್- ಉಳಿಯಲಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಸ್ಥಗಿತಗೊಂಡ ಶತಮಾನೋತ್ಸವ ಭವನ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ೧೦೦ ವರ್ಷಗಳು ತುಂಬಿದ ಸವಿನೆನಪಿಗೆ ಬೃಹತ್ ಭವನ ನಿರ್ಮಿಸುವ ಯೋಜನೆಯೊಂದು ೨೦೦೭ರಲ್ಲಿ ಸಿದ್ಧಗೊಂಡು, ೧೬ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

೨೦೦೭ರಲ್ಲಿ ಎಂಎಲ್‌ಎ ಆಗಿದ್ದ ಬಿ.ಎ.ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾ ಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ ರೂ. ೧೮ ಲಕ್ಷ, ಮಲೆನಾಡು ಅಭಿವೃದ್ಧಿ ಮಂಡಳಿ ಯಿಂದ ವಿವಿಧ ಹಂತಗಳಲ್ಲಿ ರೂ. ೧೫ ಲಕ್ಷ, ರಾಜ್ಯಸಭಾ ಸದಸ್ಯ ರೆಹಮಾನ್‌ಖಾನ್‌ರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿದ ರೂ ೪ ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾ ಭಿವೃದ್ಧಿ ನಿಧಿಯಿಂದ ರೂ. ೨.೫ ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ ೩ ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ.೪೦ರಷ್ಟು ಪೂರ್ಣಗೊಂಡಿದೆ.

ಇದೀಗ ೧೬ ವರ್ಷಗಳಾಗಿವೆ. ಶತಮಾನೋತ್ಸವ ಭವನ ಪಾಳುಬಿದ್ದ ಕಟ್ಟಡವಾಗಿದ್ದು, ಅಲೆಮಾರಿಗಳು, ಜಾನುವಾರುಗಳ ಆಶ್ರಯತಾಣವಾಗಿ ಪರಿಣಮಿಸಿದೆ. ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯಂತೂ ನಿದ್ರಾವಸ್ಥೆಯಲ್ಲಿದೆ.

ಈ ನಡುವೆ ೧೪ ವರ್ಷಗಳ ಬಳಿಕ ಅಪ್ಪಚ್ಚುರಂಜನ್ ಅವರು ಫೆಬ್ರವರಿ ೨೦೨೨ರ ತಾ. ೧೦ರಂದು ಭವನ ಕಟ್ಟಡಕ್ಕೆ ಭೇಟಿ ನೀಡಿದ್ದರು. ಸಮಿತಿ ಯವರೊಂದಿಗೆ ಸಭೆಯನ್ನೂ ನಡೆಸಿದ್ದರು. ಆದರೆ ಈ ಬಗ್ಗೆ ಯಾವುದೇ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿರಲಿಲ್ಲ. ಶತಮಾನೋತ್ಸವ ಭವನ ಸಮಿತಿಯ ಅಸಹಕಾರ ದಿಂದಾಗಿ ಯೋಜನೆಯು ಮರುಜೀವ ಪಡೆದುಕೊಳ್ಳುವಲ್ಲಿ ಎಡವಿತು.

೨೦೦೭ರಲ್ಲಿ ೧.೨೫ ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಇದೀಗ ಯೋಜನಾ ವೆಚ್ಚ ಅಧಿಕವಾಗಲಿದ್ದು, ಭವನದ ಕಾಮಗಾರಿ ಪೂರ್ಣ ಗೊಳ್ಳಲು ಕನಿಷ್ಟ ೨.೫೦ ಕೋಟಿ ಹಣದ ಅಗತ್ಯವಿದೆ ಎನ್ನಲಾಗಿದೆ.

ಒಟ್ಟಾರೆ ಸೋಮವಾರಪೇಟೆ ಪಟ್ಟಣದಿಂದ ಕೇವಲ ೫೦೦ ಮೀಟರ್ ಅಂತರದಲ್ಲಿ ಎರಡು ಬೃಹತ್ ಯೋಜನೆಗಳು ಹಳ್ಳ ಹಿಡಿಯುತ್ತಿದ್ದು, ನೂತನ ಸರ್ಕಾರ ಹಾಗೂ ಶಾಸಕರು ಈ ಬಗ್ಗೆ ಗಮನ ಹರಿಸಿದರೆ ಸಾರ್ವ ಜನಿಕರು ಹಾಗೂ ಕ್ರೀಡಾ ಪ್ರೇಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.