ಶನಿವಾರಸಂತೆ, ಮೇ ೩೧: ಪಟ್ಟಣದ ಸಂತೆ ಮಾರುಕಟ್ಟೆಯೊಳಗೆ ಪ್ರತಿ ಶನಿವಾರ ವಾರದ ಸಂತೆಯ ದಿನ ಮುಂಜಾನೆ ಬಿರುಸಾಗಿ ನಡೆಯುತ್ತಿದ್ದ ಹಸಿರು ಮೆಣಸಿನಕಾಯಿ ಸಂತೆ ಇಂದು ಕಂಡು ಬರುತ್ತಿಲ್ಲ. ಆ ಮೆಣಸಿನಕಾಯಿಯ ಹಸಿಹಸಿ ಘಾಟು ರೈತರ ಮತ್ತು ವ್ಯಾಪಾರಿಗಳ ನಡುವೆ ನಡೆಯುತ್ತಿದ್ದ ದರದ ಬಿಸಿಬಿಸಿ ಚರ್ಚೆ, ಲಾರಿಗೆ ಮೆಣಸಿನಕಾಯಿ ತುಂಬಿದ ಚೀಲಗಳನ್ನು ಲೋಡು ಮಾಡುತ್ತಿದ್ದ ಕೂಲಿ ಕಾರ್ಮಿಕರ ಪೈಪೋಟಿ ಯಾವುದು ಕಾಣುತ್ತಿಲ್ಲ.!
೨೦ ರ ದಶಕದಲ್ಲಿ ೨೦೧೭ ರವರೆಗೆ ಕೋವಿಡ್ ಲಾಕ್ಡೌನ್ಗೂ ಮೊದಲು ಕಂಡು ಬರುತ್ತಿದ್ದ ಹಸಿರು ಮೆಣಸಿನಕಾಯಿ ಸಂತೆ ಇಂದು ಗತ ವೈಭವ ಮಾತ್ರ. ವಾರದಲ್ಲಿ ಶನಿವಾರ ಮಾತ್ರವಲ್ಲ; ಶುಕ್ರವಾರ, ಭಾನುವಾರವೂ ನಡೆಯುತ್ತಿದ್ದು ಜಿಲ್ಲೆಯಲ್ಲಿ ಮಾತ್ರವಲ್ಲ; ರಾಜ್ಯ ಮಟ್ಟದಲ್ಲೂ ಖ್ಯಾತಿ ಪಡೆದಿದ್ದ ಹಸಿರು ಮೆಣಸಿನಕಾಯಿ ಸಂತೆಯನ್ನು ಭವಿಷ್ಯದಲ್ಲಿ ಕಾಣಲು ಸಾಧ್ಯವಿಲ್ಲವೇನೋ
ಹೌದು, ಈ ವರ್ಷ ಮೆಣಸಿನಕಾಯಿ ಸಂತೆ ಮಾರುಕಟ್ಟೆ ಯಲ್ಲಿ ನಡೆಯುತ್ತಿಲ್ಲ. ಬೆರಳೆಣಿಕೆಯ ರೈತರಷ್ಟೇ ತಂದು ಮಾರಾಟ ಮಾಡಿ ಹೋಗುತ್ತಿದ್ದಾರೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮೆಣಸಿನ ಕಾಯಿ ಬೆಳೆದವರ ಸಂಖ್ಯೆ ಗಣನೀಯವಾಗಿ ಕಡಿಮೆಯಿದೆ. ಶೇ.೧೦ ರಷ್ಟು ರೈತರು ಮಾತ್ರ ಬೆಳೆದಿದ್ದಾರೆ. ಸಂತೆ ನಡೆಯದಿರಲು ಮತ್ತೊಂದು ಮುಖ್ಯ ಕಾರಣ, ವ್ಯಾಪಾರಿಗಳೇ ಮೆಣಸಿನಕಾಯಿ ಬೆಳೆದ ರೈತರ ಮನೆ ಬಾಗಿಲಿಗೆ ಬಂದು ಖರೀದಿಸಿ ಮಂಡಿಗಳಿಗೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ರವಾನಿಸುತ್ತಿದ್ದಾರೆ. ಅಲ್ಲದೇ ಸಂತೆಗೆ ತಂದರೆ ರೈತ ಚೀಲವೊಂದಕ್ಕೆ ರೂ.೧೦ ಸುಂಕ ನೀಡಬೇಕು.
ಸೋಜಿಗವೆಂದರೆ, ಮೆಣಸಿನ ಕಾಯಿ ದರ ಮಾತ್ರ ಏರಿಕೆಯಾಗಿದೆ.ಈ ವಾರ ೧ ಕೆ.ಜಿ. ಮೆಣಸಿನಕಾಯಿಗೆ ರೂ.೩೦-೪೦ ದರವಿದೆ.ಮನೆ ಬಾಗಿಲಿಗೆ ವ್ಯಾಪಾರಿಗಳು ಬರುವುದರಿಂದ ಅವರು ನಿಗಧಿಪಡಿಸಿದ ದರಕ್ಕೆ ರೈತರು ಮಾರದೇ ವಿಧಿಯಿಲ್ಲ. ಪಟ್ಟಣದಲ್ಲಿ ತರಕಾರಿ ಅಂಗಡಿಗಳಲ್ಲಿ ಕೆ.ಜಿ.ಗೆ ರೂ.೬೦ ದರದಲ್ಲಿ ಮಾರುತ್ತಿದ್ದಾರೆ.
ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದಕ್ಕೂ ಹಲವಾರು ಕಾರಣಗಳಿವೆ ಮೆಣಸಿನಕಾಯಿ ಬೆಳೆದ ರೈತರ ಕುಟುಂಬದವರೇ ಗದ್ದೆಯಲ್ಲಿ ಮೆಣಸಿನಕಾಯಿ ಕೊಯ್ಯುವ ಕೆಲಸ ಮಾಡಬೇಕಾಗಿದೆ. ಕೂಲಿ ಕಾರ್ಮಿಕರ ಕೊರತೆಯ ಜತೆಗೆ ದಿನವೊಂದಕ್ಕೆ ಮೆಣಸಿನಕಾಯಿ ಕೊಯ್ಯುವ ಕಾರ್ಮಿಕ ಮಹಿಳೆ - ಪುರುಷನಿಗೆ ಒಬ್ಬರಿಗೆ ರೂ.೫೦೦ ಕೂಲಿ ಕೊಡಲೇ ಬೇಕು.ಬಹುತೇಕ ಕೂಲಿ ಕಾರ್ಮಿಕರು ಕಾಫಿ ತೋಟಗಳಿಗೆ ಹೋಗಲು ಇಚ್ಛಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ರೈತರು ಮೆಣಸಿನಕಾಯಿ ಬೆಳೆಯುವ ಒಲವು ತೋರುತ್ತಿಲ್ಲ ಎಂದು ಕೂಜಗೇರಿ ಗ್ರಾಮದ ಪ್ರಗತಿಪರ ಕೃಷಿಕ ಕೆ.ಟಿ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ೧೫-೨೦ ವರ್ಷಗಳ ಹಿಂದೆ ಸಂತೆಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಸಿರು ಮೆಣಸಿನಕಾಯಿ ಸಂತೆಯಿAದ ಉತ್ತಮ ಆದಾಯ ಗಳಿಸುತ್ತಿತ್ತು. ನಂತರ ಸಂತೆ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆಯುತ್ತಿತ್ತು. ಕ್ರಮೇಣ ಹವಾಮಾನ ವೈಪರೀತ್ಯ, ದರದ ಏರಿಳಿತ, ಪಂಚಾಯಿತಿಗಳ ನಡುವಣ ಪೈಪೋಟಿ, ಕೋವಿಡ್ ಲಾಕ್ಡೌನ್ ಇತ್ಯಾದಿ ಕಾರಣಗಳಿಂದ ಹಸಿರು ಮೆಣಸಿನಕಾಯಿ ಸಂತೆಯ ವೈಭವ ಮರೆಯಾಯಿತು. ಆ ಹಸಿರು ಮೆಣಸಿನಕಾಯಿ ಗತವೈಭವ ಮತ್ತೆ ಮರುಕಳಿಸುವುದೇ?
-ಶ.ಗ. ನಯನತಾರಾ