ಪೊನ್ನಂಪೇಟೆ, ಮೇ ೩೧: ಹುಲಿ ದಾಳಿಗೆ ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ರೈತ ದೇಯಂಡ ಪಿ ಬೆಳ್ಳಿಯಪ್ಪ (ಬೊಳ್ಳಿಕಟ್ಟಿ) ಎಂಬವರ ಗಬ್ಬದ ಹಸು ಬಲಿಯಾಗಿದೆ.
ಇಂದು ಬೆಳಿಗ್ಗೆ ಗದ್ದೆ ಸಮೀಪ ಮೇಯಲು ಬಿಟ್ಟಿದ್ದ ಹಸುವನ್ನು, ಕೊಟ್ಟಿಗೆಗೆ ಕರೆತರಲು ಸಂಜೆ ತೆರಳಿದ್ದ ಸಂದರ್ಭ ತೋಟದ ಬದಿ ರಸ್ತೆಯಲ್ಲಿ ಹುಲಿ ದಾಳಿಗೆ ಒಳಗಾಗಿ ಹಸು ಸತ್ತು ಬಿದ್ದಿರುವುದು ಕಂಡು ಬಂದಿದೆ. ಇದನ್ನು ಕಂಡ ಹಸುವಿನ ಮಾಲೀಕ ಗ್ರಾಮಸ್ಥರಾದ ದೇಯಂಡ ಸಂತೋಷ್ ಎಂಬವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸಂತೋಷ್ ರವರು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ಅರಣ್ಯ ವಲಯ ಆರ್ ಎಫ್ ಓ, ಬಿ.ಎಂ.ಶAಕರ್ ಮತ್ತು ಸಿಬ್ಬಂದಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ, ಕತ್ತಲಾಗಿದ್ದ ಕಾರಣ ಕಾರ್ಯಾಚರಣೆಯನ್ನು ತಾ. ೭ಕ್ಕೆ ಮುಂದೂಡಿ, ಹಸುವಿನ ಕಳೆಬರ ಸಮೀಪ ಹುಲಿಯ ಚಲನವಲನ ವೀಕ್ಷಿಸಲು ಕ್ಯಾಮೆರಾ ಅಳವಡಿಸಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ದೇಯಂಡ ಸಂತೋಷ್, ದೇಯಂಡ ಡಾಲಿ, ಮಾಚಿಮಾಡ ಪೆಮ್ಮಯ್ಯ, ಮಾಪಿರ ಕಿರಣ, ತಾಣಚ್ಚಿರ ಬೆಳ್ಳಿಯಪ್ಪ, ಅರಣ್ಯ ರಕ್ಷಕರಾದ ಅಂತೋಣಿ ಪ್ರಕಾಶ್, ಸಂಜಯ್, ಆರ್ ಆರ್ ಟಿ ಸಿಬ್ಬಂದಿ ಹಾಗೂ ಬಲ್ಯಮಂಡೂರು ಗ್ರಾಮಸ್ಥರು ಹಾಜರಿದ್ದರು. -ಚನ್ನನಾಯಕ