ಕೂಡಿಗೆ, ಮೇ ೩೧: ಜಿಲ್ಲಾಡಳಿತ, ಜಿ.ಪಂ. ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸಹಯೋಗದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡನೆಟ್ಟ ಜಿಲ್ಲಾಧಿಕಾರಿ ಮಕ್ಕಳಿಗೆ ಸಿಹಿಯೊಂದಿಗೆ ಉಚಿತ ಪಠ್ಯಪುಸ್ತಕ ಹಾಗೂ ಬಟ್ಟೆ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಕಲಿಕೆಯೊಂದಿಗೆ ಪೋಷಕರಿಗೆ ಗೌರವ ಸಲ್ಲಿಸಬೇಕು ಎಂದರು.
ಡಿಡಿಪಿಐ ಸಿ. ರಂಗಧಾಮಯ್ಯ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಶಾಲಾ ಪ್ರಾರಂಭದಲ್ಲೇ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತç ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಬಿಇಓ ಕೆ.ವಿ. ಸುರೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎಂದರು. ಶಾಲಾ ಆರಂಭೋತ್ಸವದ ಮಹತ್ವ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟಿçÃಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ.) ಯೋಜನೆಯ ಉಪ ಯೋಜನಾ ಸಮನ್ವಯಾಧಿಕಾರಿ ಸೌಮ್ಯ, ವಿಷಯ ಪರಿವೀಕ್ಷಕಿ ಕೆ.ಆರ್. ಬಿಂದು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ಸಿಆರ್‌ಪಿ ಕೆ. ಶಾಂತಕುಮಾರ್, ಎಸ್‌ಡಿಎಂಸಿ ಸದಸ್ಯರಾದ ಜವರಯ್ಯ, ನಾಗರಾಜ್, ರವಿಕುಮಾರ್, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಕೆ.ಎಸ್. ರಾಜಾಚಾರಿ, ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಉಪ ತಹಶೀಲ್ದಾರ್ ಮಧುಸೂದನ್, ಪಿಡಿಓ ಎಂ.ಆರ್. ಸಂತೋಷ್, ಡಿ.ಆರ್‌ಎಫ್‌ಓ ಭವ್ಯ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಸ್. ಸುಜಾತ, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಿ.ಜಿ. ಪ್ರೇಮಕುಮಾರ್ ಸ್ವಾಗತಿಸಿ, ಶಿಕ್ಷಕಿ ಬಿ.ಎಸ್. ಅನ್ಸಿಲಾ ರೇಖಾ ನಿರೂಪಿಸಿದರು. ಶಿಕ್ಷಕ ಎಂ.ಟಿ. ದಯಾನಂದ ಪ್ರಕಾಶ್ ವಂದಿಸಿದರು.
ಎತ್ತಿನ ಗಾಡಿಯಲ್ಲಿ ಮೆರವಣಿಗೆ: ಶಾಲಾ ಪ್ರಾರಂಭೋತ್ಸವಕ್ಕೆ ಮುನ್ನ ಕೂಡ್ಲೂರು ಗ್ರಾಮದ ಮುಖ್ಯ ರಸ್ತೆಯಿಂದ ಗ್ರಾಮದ ಬೀದಿ ಮೂಲಕ ಜಿಲ್ಲಾಧಿಕಾರಿ ಡಾ ಬಿ.ಸಿ. ಸತೀಶ, ಮಕ್ಕಳೊಂದಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿದರು.
ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಮಧ್ಯಾಹ್ನ ಮಕ್ಕಳಿಗೆ ಪಾಯಸದೊಂದಿಗೆ ಬಿಸಿಯೂಟ ವಿತರಿಸಲಾಯಿತು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಶಾಲಾ ಮಕ್ಕಳೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ, ಮಕ್ಕಳು ಆಟ-ಪಾಠದೊಂದಿಗೆ ಸಂತಸದ ಕಲಿಕೆಯಲ್ಲಿ ತೊಡಗುವ ಮೂಲಕ ಚೆನ್ನಾಗಿ ಓದಿ ತಂದೆ - ತಾಯಿಗೆ ಉತ್ತಮ ಹೆಸರು ತರಬೇಕು ಎಂದರು. ಉತ್ತಮ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಹುದ್ದೆ ಅಲಂಕರಿಸಬಹುದು ಎಂದರು.